ADVERTISEMENT

ಪುಲ್ವಾಮಾ ಟೀಕಾಕಾರರ ಬಣ್ಣ ಬಯಲು: ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಸರ್ದಾರ್ ವಲ್ಲಭಭಾಯಿ ಪಟೇಲ್ 145ನೇ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 19:31 IST
Last Updated 31 ಅಕ್ಟೋಬರ್ 2020, 19:31 IST
ಸರ್ದಾರ್ ವಲಭಭಾಯಿ ಪಟೇಲ್‌ ಪ್ರತಿಮೆ ಸಮೀಪ ಏಕತಾ ದಿನದ ಪಥಸಂಚಲನದ ಗೌರವ ವಂದನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಕರಿಸಿದರು–ಪಿಟಿಐ ಚಿತ್ರ
ಸರ್ದಾರ್ ವಲಭಭಾಯಿ ಪಟೇಲ್‌ ಪ್ರತಿಮೆ ಸಮೀಪ ಏಕತಾ ದಿನದ ಪಥಸಂಚಲನದ ಗೌರವ ವಂದನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಕರಿಸಿದರು–ಪಿಟಿಐ ಚಿತ್ರ   

ಅಹಮದಾಬಾದ್: ‘ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಯೋಧರ ತ್ಯಾಗವನ್ನು ಪ್ರಶ್ನೆ ಮಾಡಿ, ರಾಜಕೀಯ ಹೇಳಿಕೆ ನೀಡಿದ್ದವರ ಬಣ್ಣ ಬಯಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ. ‘ಪುಲ್ವಾಮಾ ದಾಳಿ ನಡೆಸಿದ್ದು ಪಾಕಿಸ್ತಾನ’ ಎಂಬುದಾಗಿ ಅಲ್ಲಿನ ಸಚಿವರು ನೀಡಿದ ಹೇಳಿಕೆಯನ್ನು ಉಲ್ಲೇಖಸಿ ಪ್ರಧಾನಿ ಮಾತನಾಡಿದ್ದಾರೆ.‘ಪುಲ್ವಾಮಾ ದಾಳಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ಸಾಧನೆ’ ಎಂದು ಪಾಕ್ ಸಚಿವ ಫವಾದ್ ಚೌಧರಿ ಅವರು ಇತ್ತೀಚೆಗೆ ಹೇಳಿಕೆ ಕೊಟ್ಟಿದ್ದರು.

‘ದೇಶದಲ್ಲಿ ಪುಲ್ವಾಮಾ ದಾಳಿ ನಡೆದ ಬಳಿಕ ರಾಜಕೀಯ ಕಾರಣಕ್ಕೆ ಹೇಳಿಕೆ ನೀಡಿದವರು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂಬುದಕ್ಕೆ ಇದೊಂದು ನಿದರ್ಶನ. ಜೀವವನ್ನೇ ಪಣಕ್ಕಿಟ್ಟ ವೀರ ಸೇನಾನಿಗಳ ತ್ಯಾಗವನ್ನು ನಾನು ಎಂದಿಗೂ ಮರೆಯಲು ಸಾಧ್ಯ
ವಿಲ್ಲ’ ಎಂದು ಪ್ರಧಾನಿ ಹೇಳಿದರು.

ನರ್ಮದಾ ಜಿಲ್ಲೆಯ ಕೆವಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 145ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ‘ಏಕತಾ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗತ್ತಿನ ಅತಿ ಎತ್ತರದ ‘ಏಕತಾ ಪ್ರತಿಮೆ’ ಸ್ಥಳದಲ್ಲಿ 17 ಪ್ರವಾಸಿ ಸೌಲಭ್ಯಗಳನ್ನು ಪ್ರಧಾನಿ ಉದ್ಘಾಟಿಸಿದರು.

ADVERTISEMENT

ನಿರ್ದಿಷ್ಟವಾಗಿ ಯಾವುದೇ ಪಕ್ಷದ ಹೆಸರು ಹೇಳದ ಅವರು, ರಾಜಕೀಯ ಪಕ್ಷಗಳು ಘಟನೆಯನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡ ರೀತಿಯನ್ನು ಎಂದಿಗೂ ಮರೆಯುವುದಿಲ್ಲ ಎಂದರು. ‘ಏಕತೆ ದೇಶದ ಶಕ್ತಿ. ದೇಶದ ವೈವಿಧ್ಯವನ್ನು ನಮ್ಮ ದೌರ್ಬಲ್ಯ ಎಂದು ಕೆಲವರು ಭಾವಿಸಿದ್ದಾರೆ. ಅಂತಹವರ ಬಗ್ಗೆ ಜಾಗರೂಕರಾಗಿರಿ’ ಎಂದು ಕರೆ ನೀಡಿದರು.

ಭಾರತದ ದೃಷ್ಟಿಕೋನ ಮತ್ತು ಗಡಿಗಳ ಬಗೆಗಿನ ನಿಲುವುಗಳು ಬದಲಾಗಿವೆ. ಭರತಭೂಮಿಯ ಮೇಲೆ ಕಣ್ಣಿಟ್ಟವರು ಸೂಕ್ತ ಪ್ರತ್ಯುತ್ತರ ಪಡೆಯುತ್ತಿದ್ದಾರೆ. ಭಾರತವು ಗಡಿಯಲ್ಲಿ ನೂರಾರು ಕಿಲೋಮೀಟರ್ ರಸ್ತೆ, ಹತ್ತಾರು ಸೇತುವೆ ಮತ್ತು ಅನೇಕ ಸುರಂಗಗಳನ್ನು ನಿರ್ಮಿಸುತ್ತಿದೆ. ತನ್ನ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ರಕ್ಷಿಸಲು ಭಾರತ ಸಿದ್ಧವಾಗಿದೆ’ ಎಂದು ಪ್ರಧಾನಿ ಯಾವ ದೇಶದ ಹೆಸರನ್ನೂ ಉಲ್ಲೇಖಿಸದೆ ನುಡಿದರು.

ಸೀಪ್ಲೇನ್‌ ಸೇವೆಗೆ ಚಾಲನೆ: ಕೆವಡಿಯಾದ ಏಕತಾ ಪ್ರತಿಮೆ ಹಾಗೂ ಸಾಬರಮತಿ ನಡುವೆ ಸೀಪ್ಲೇನ್‌ ಸೇವೆ ಶುರುವಾಗಿದೆ.ಏಕತಾ ದಿನದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ, ಸರ್ದಾರ್ ಸರೋವರ ಜಲಾಶಯ ಸಮೀಪದ ಪಾಂಡ್–3 ಬಳಿಯಿಂದ ಎರಡು ಎಂಜಿನ್‌ಗಳ ವಿಮಾನದಲ್ಲಿ ಸ್ವತಃ ಪ್ರಯಾಣಿಸುವ ಮೂಲಕ ಮೋದಿ ಅವರು ಯೋಜನೆಗೆ ಚಾಲನೆ ನೀಡಿದರು.

ಪ್ರಧಾನಿ ಸೇರಿದಂತೆ ಗಣ್ಯರನ್ನು ಹೊತ್ತ ವಿಮಾನವು 200 ಕಿಲೋಮೀಟರ್ ದೂರದ ಅಹಮದಾಬಾದ್‌ನ ಸಾಬರಮತಿ ನದಿತೀರವನ್ನು 40 ನಿಮಿಷಗಳಲ್ಲಿ ತಲುಪಿತು.

ಪ್ರಯಾಣಿಕರು ವಿಮಾನ ಹತ್ತಲು ಮತ್ತು ಇಳಿಯಲು ಅನುಕೂಲವಾಗುವಂತೆ ತೇಲುವ ಜೆಟ್ಟಿ, ವಾಟರ್ ಏರೊಡ್ರಮ್ ನಿರ್ಮಿಸಲಾಗಿದೆ. ಸ್ಪೈಸ್‌ ಜೆಟ್ ಕಂಪನಿಯ ವಿಮಾನವು ದಿನಕ್ಕೆ ಎರಡು ಬಾರಿ ಕೆವಡಿಯಾ–ಅಹಮದಾಬಾದ್‌ ನಡುವೆ ಸಂಚಾರ ಮಾಡಲಿದೆ.
ಒಂದು ಬದಿಯ ಪ್ರಯಾಣಕ್ಕೆ ₹1,500 ಟಿಕೆಟ್ ನಿಗದಿಪಡಿಸಲಾಗಿದೆ.

ಪ್ರೊಬೇಷನರಿ ಅಧಿಕಾರಿಗಳಿಗೆ ಪಾಠ: ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಮೂಲಮಂತ್ರದೊಂದಿಗೆ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡಬೇಕು ಎಂದು ಐಎಎಸ್ ಪ್ರಬೇಷನರಿ ಅಧಿಕಾರಿಗಳಿಗೆ ಮೋದಿ ಕಿವಿಮಾತು ಹೇಳಿದರು.

ಕೆವಡಿಯಾದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ಜೀವನದಲ್ಲಿ ಎರಡು ದಾರಿಗಳಿಗೆ. ಆರಾಮದಾಯಕ ಕೆಲಸ, ಹೆಸರು, ಪ್ರಸಿದ್ಧಿ ಒಂದೆಡೆಯಾದರೆ, ಹೋರಾಟ, ಕಷ್ಟ,ಸಮಸ್ಯೆಗಳನ್ನು ಎದುರಿಸುವುದು ಇನ್ನೊಂದು ಕಡೆ. ಸುಲಭದ ದಾರಿಯ ಬದಲು ನೈಜ ಸವಾಲುಗಳನ್ನು ಎದುರಿಸಿ’ ಎಂದು ಪ್ರಧಾನಿ ಕರೆ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.