ADVERTISEMENT

ನೋಟು ರದ್ದು ಮಾಡಿ ಬಡವರ ಹಣ ಕಸಿದು ಶ್ರೀಮಂತರಿಗೆ ನೀಡಿದ ಮೋದಿ: ರಾಹುಲ್ ಗಾಂಧಿ

ಪಿಟಿಐ
Published 30 ಆಗಸ್ಟ್ 2018, 19:55 IST
Last Updated 30 ಆಗಸ್ಟ್ 2018, 19:55 IST
   

ನವದೆಹಲಿ: ‘ನೋಟು ರದ್ದತಿ ಯೋಜನೆ ಮೂಲಕಪ್ರಧಾನಿ ನರೇಂದ್ರ ಮೋದಿ, ಜನಸಾಮಾನ್ಯರ ಹಣವನ್ನು ಕಸಿದುಕೊಂಡು ತನ್ನ ಬಂಡವಾಳಶಾಹಿ ಗೆಳೆಯರ ಜೇಬು ತುಂಬಿಸಿದರು. ಇದು ಅತ್ಯಂತ ದೊಡ್ಡ ಹಗರಣ’ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ರದ್ದಾದ ನೋಟುಗಳಲ್ಲಿ ಶೇ 99.3ರಷ್ಟು ವಾಪಸ್‌ ಆಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿ ನೀಡಿದ ಬೆನ್ನಲ್ಲೇ ಪ್ರಧಾನಿ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

‘15–10 ಬಂಡವಾಳಶಾಹಿಗಳು ಚುನಾವಣೆಯಲ್ಲಿ ಮೋದಿಯನ್ನು ಚೆನ್ನಾಗಿ ‘ಮಾರ್ಕೆಟ್’ ಮಾಡಿದ್ದರು. ಮೋದಿಯ ಆ ಗೆಳೆಯರೆಲ್ಲರೂ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ಸಾಲ ಪಡೆದು, ತೀರಿಸಿರಲಿಲ್ಲ. ಕೈಬರಿದು ಮಾಡಿಕೊಂಡಿದ್ದ ಗೆಳೆಯರ ಜೇಬು ತುಂಬಿಸುವ ಸಲುವಾಗಿ ಮೋದಿ ನೋಟು ರದ್ದತಿ ಮಾಡಿದರು. ಹೀಗಾಗಿಯೇ ಇದು ಅತ್ಯಂತ ದೊಡ್ಡ ಹಗರಣ’ ಎಂದು ರಾಹುಲ್ ವಿವರಿಸಿದ್ದಾರೆ.

ADVERTISEMENT

‘ಮೋದಿಯ ಗೆಳೆಯರು ತಮ್ಮ ಕಪ್ಪು ಹಣವನ್ನು ನೋಟು ರದ್ದತಿ ಯೋಜನೆ ಮೂಲಕ ಪರಿವರ್ತಿಸಿಕೊಂಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಷಾ ನಿರ್ದೇಶಕರಾಗಿರುವ ಗುಜರಾತ್‌ನ ಸಹಕಾರ ಬ್ಯಾಂಕ್‌ ಒಂದರಲ್ಲೇ ₹ 700 ಕೋಟಿ ಕಪ್ಪು ಹಣವನ್ನು ಪರಿವರ್ತಿಸಲಾಗಿದೆ. ಆ ಹಣ ಯಾರದ್ದು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಒಂದೊಂದೇ ಸತ್ಯ ಹೊರಗೆ ಬರಲಿದೆ’ ಎಂದು ರಾಹುಲ್ ಆರೋಪಿಸಿದ್ದಾರೆ.

‘ಒಟ್ಟು ದೇಶೀಯ ಉತ್ಪನ್ನ ಕುಸಿತದ ಹಾದಿಯಲ್ಲಿತ್ತು. ನಿರುದ್ಯೋಗ ಪ್ರಮಾಣ ಹೆಚ್ಚುತ್ತಿತ್ತು. ಪರಿಸ್ಥಿತಿ ಅಷ್ಟು ಚಿಂತಾಜನಕವಾಗಿದ್ದ ಸಂದರ್ಭದಲ್ಲಿ ಮೋದಿ ನೋಟು ರದ್ದು ಮಾಡಿದರು. ಈ ಮೂಲಕ ದೇಶದ ಆರ್ಥಿಕತೆಗೆ ಮೋದಿ ಆಳವಾದ ಗಾಯ ಮಾಡಿದರು. ನೋಟು ರದ್ದತಿಯ ಅವಶ್ಯಕತೆ ಏನಿತ್ತು? ನೋಟು ರದ್ದತಿಯ ಹಿಂದಿನ ತರ್ಕವೇನು ಎಂದು ಜನ ಕೇಳುತ್ತಿದ್ದಾರೆ. ಉತ್ತರ ನೀಡಿ’ ಎಂದು ಅವರು ಆಗ್ರಹಿಸಿದ್ದಾರೆ.

‘ಮೋದಿ ಹೇಳುವುದು ನಿಜ. ನಾವು 70 ವರ್ಷಗಳಲ್ಲಿ ಮಾಡದೇ ಇದ್ದದನ್ನು ಮೋದಿ ಕೇವಲ ನಾಲ್ಕು ವರ್ಷಗಳಲ್ಲಿ ಮಾಡಿದ್ದಾರೆ. ಬಂಡವಾಳಶಾಹಿಗಳ ಜೇಬು ತುಂಬಿಸುವ ಕೆಲಸವನ್ನು ನಾವು 70 ವರ್ಷಗಳಲ್ಲಿ ಮಾಡಿರಲಿಲ್ಲ. ಮೋದಿ ಅದನ್ನು ನಾಲ್ಕೇ ವರ್ಷಗಳಲ್ಲಿ ಸಾಧಿಸಿದ್ದಾರೆ. ಬಡತನ ನಿರ್ಮೂಲನೆಗೆ ಕಾಂಗ್ರೆಸ್ 20 ಅಂಶಗಳ ಕಾರ್ಯಕ್ರಮ ಜಾರಿಗೆ ತಂದಿತ್ತು. ಆದರೆ ಮೋದಿ ಶ್ರೀಮಂತರನ್ನು ಒಂದೇ ಅಂಶದ ಕಾರ್ಯಕ್ರಮದ ಮೂಲಕ ಮತ್ತಷ್ಟು ಶ್ರೀಮಂತರನ್ನಾಗಿಸಿದರು’ ಎಂದು ರಾಹುಲ್ ಆರೋಪಿಸಿದ್ದಾರೆ.
**
ಮೋದಿ ತಪ್ಪು ಮಾಡಿದಾಗಲೆಲ್ಲಾ ಕ್ಷಮೆ ಕೇಳುತ್ತಾರೆ. ಆದರೆ ನೋಟು ರದ್ದತಿ ಅವರ ತಪ್ಪೇ ಅಲ್ಲ. ಅದು ಉದ್ದೇಶಪೂರ್ವಕ ಕೃತ್ಯ.
–ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
**
ತೆರಿಗೆ ತಪ್ಪಿಸುತ್ತಿದ್ದವರನ್ನು ತೆರಿಗೆ ವ್ಯಾಪ್ತಿಗೆ ತರುವುದೇ ನೋಟು ರದ್ದತಿಯ ಮೂಲ ಉದ್ದೇಶವಾಗಿತ್ತು. ಅದರಲ್ಲಿ ನಾವು ಸಫಲರಾಗಿದ್ದೇವೆ.
–ಅರುಣ್ ಜೇಟ್ಲಿ, ಕೇಂದ್ರ ಹಣಕಾಸು ಸಚಿವ
**
₹ 15.41 ಲಕ್ಷ ಕೋಟಿ
ರದ್ದು ಮಾಡಿದ ನೋಟುಗಳ ಮೌಲ್ಯ

₹ 15.31 ಲಕ್ಷ ಕೋಟಿ
ಬ್ಯಾಂಕ್‌ಗಳಿಗೆ ವಾಪಸ್ ಆದ ರದ್ದಾದ ನೋಟುಗಳ ಮೌಲ್ಯ

₹ 10,720 ಕೋಟಿ
ಬ್ಯಾಂಕ್‌ಗಳಿಗೆ ವಾಪಸ್ ಆಗದೇ ಇರುವ ರದ್ದಾದ ನೋಟುಗಳ ಮೌಲ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.