ಕೋಲ್ಕತ್ತ: ಪ್ರತಿ ವರ್ಷ 2 ಕೋಟಿ ಉದ್ಯೋಗವಕಾಶ ಸೃಷ್ಟಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.ಆದರೆ 1.6 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.ರೈತರು ಸಂಕಷ್ಟದಲ್ಲಿದ್ದಾರೆ. ಜನರಿಗೆ ಕೆಲಸವಿಲ್ಲ. ಆದರೆ ಕೇಂದ್ರ ಸರ್ಕಾರ 2019ರ ಚುನಾವಣೆ ಬಗ್ಗೆ ಯೋಚಿಸುತ್ತಿದೆ ಎಂದು ಕೋಲ್ಕತ್ತದಲ್ಲಿ ನಡೆಯುತ್ತಿರುವ ಬಿಜೆಪಿ ವಿರೋಧಿ ಪಕ್ಷಗಳ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರ‍್ಯಾಲಿಯಲ್ಲಿ ಸೋನಿಯಾ ಗಾಂಧಿಯವರ ಸಂದೇಶವನ್ನು ಓದಿ ಹೇಳಿದ ಖರ್ಗೆ, ಮುಂಬರುವ ಚುನಾವಣೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಮೂಡುವಂತೆ ಮಾಡಲಿದೆ. ಈ ರ‍್ಯಾಲಿ ಮೋದಿ ಸರ್ಕಾರದ ವಿರುದ್ಧ ಹೋರಾಡುವ ನಾಯಕರನ್ನು ಒಟ್ಟು ಮಾಡಿದೆ ಎಂದಿದ್ದಾರೆ.
ಸೀಟು ಹಂಚಿಕೆ ಕಠಿಣ ಕೆಲಸ: ಎಚ್‍ಡಿ ದೇವೇಗೌಡ
ವಿವಿಧ ರಾಜ್ಯಗಳಲ್ಲಿ ಸೀಟು ಹಂಚುವ ಕೆಲಸ ಕಠಿಣ ಕಾರ್ಯವಾಗಿದೆ.ಇದನ್ನು ನಾಯಕರೇ ನಿರ್ಧರಿಸುವಂತಾಗಬೇಕು.ನಮ್ಮಲ್ಲೀಗ ಜೆಪಿ ಅಥವಾ ಆಚಾರ್ಯ ಕೃಪಲಾನಿಯಂತವರು ಇಲ್ಲ.ಮೈತ್ರಿ ಸರ್ಕಾರ ಯಾವ ರೀತಿ ಮುಂದೆ ಸಾಗುತ್ತದೆ ಎಂಬುದರ ಬಗ್ಗೆ ನಾವು ಜನರಿಗೆ ವಿಶ್ವಾಸ ನೀಡಬೇಕು.ಇಲ್ಲಿ ಮೋದಿಗೆ ತಕ್ಕ ಉತ್ತರ ನೀಡುವುದಕ್ಕಾಗಿ ನಾಯಕರೆಲ್ಲರೂ ಒಗ್ಗೂಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಎಸ್‍ಪಿ-ಬಿಎಸ್‍ಪಿ ಮೈತ್ರಿ ಘೋಷಣೆ ಆದರ ಕೂಡಲೇ ಆರೋಪ ಪಟ್ಟಿ ದಾಖಲಾಯಿತು.ಕೇಂದ್ರ ಸರ್ಕಾರ ತಮ್ಮ ಅಧಿಕಾರ ಬಳಸಿ ವಿಪಕ್ಷ ನಾಯಕರ ಮೇಲೆ ಆರೋಪ ಮಾಡುತ್ತಿದೆ ಎಂದಿದ್ದಾರೆ ಗೌಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.