ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಇರುವ ಸೆಲ್ಫಿ ಬೂತ್‌ಗಳನ್ನು ಸ್ಥಾಪನೆ ಮಾಡುವುದನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಟೀಕಿಸಿದ್ದಾರೆ. ಲಜ್ಜೆಗೆಟ್ಟು ತೆರಿಗೆ ಪಾವತಿದಾರರ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಅವರು, ‘ಮೋದಿ ಸರ್ಕಾರದ ಸ್ವಯಂ ಗೀಳಿನ ಪ್ರಚಾರಕ್ಕೆ ಮಿತಿಯೇ ಇಲ್ಲ’ ಎಂದು ತೀಕ್ಷ್ಣ ಮಾತುಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
‘ರೈಲ್ವೆ ನಿಲ್ದಾಣಗಳಲ್ಲಿ ಮೋದಿಯವರ 3D ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸುವ ಮೂಲಕ ತೆರಿಗೆದಾರರ ಹಣವನ್ನು ನಿರ್ಲಜ್ಜವಾಗಿ ಪೋಲು ಮಾಡಲಾಗುತ್ತದೆ’ ಎಂದು ಅವರು ಬರೆದುಕೊಂಡಿದ್ದಾರೆ.
ಈ ಹಿಂದೆ 822 ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲು ಆದೇಶಿಸುವ ಮೂಲಕ ವೀರ ಯೋಧರ ರಕ್ತ ಹಾಗೂ ತ್ಯಾಗವನ್ನು ರಾಜಕೀಯಕ್ಕಾಗಿ ಬಳಸಲಾಗಿತ್ತು ಎಂದು ಖರ್ಗೆ ಹೇಳಿದ್ದಾರೆ.
‘ಮೋದಿ ಸರ್ಕಾರವು ಯಾವುದೇ ರಾಜ್ಯಗಳಿಗೆ ಬರ ಹಾಗೂ ಅತಿವೃಷ್ಠಿ ಪರಿಹಾರವನ್ನು ನೀಡಿಲ್ಲ. ವಿರೋಧ ಪಕ್ಷಗಳು ಆಳ್ವಿಕೆ ಮಾಡುತ್ತಿರುವ ರಾಜ್ಯಗಳ ನರೇಗಾ ನಿಧಿ ಬಿಡುಗಡೆ ಬಾಕಿ ಇದೆ. ಆದರೆ ಈ ಅಗ್ಗದ ಚುನಾವಣಾ ಸ್ಟಂಟ್‌ಗಳಿಗೆ ಸಾರ್ವಜನಿಕ ಹಣವನ್ನು ಉದಾರವಾಗಿ ಚೆಲ್ಲಾಟವಾಡುವ ಧೈರ್ಯವಿದೆ’ ಎಂದು ಕಿಡಿಕಾರಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರ ರೈಲ್ವೆ ವಿಭಾಗದಲ್ಲಿ ತಾತ್ಕಾಲಿಕ ಹಾಗೂ ಕಾಯಂ ಸೆಲ್ಫಿ ಬೂತ್‌ಗಳನ್ನು ಸ್ಥಾಪಿಸಲು ಉದ್ದೇಶಿಸಿರುವ ನಿಲ್ದಾಣಗಳ ಪಟ್ಟಿಯನ್ನೂ ಅವರು ಹಂಚಿಕೊಂಡಿದ್ದಾರೆ.
ಆರ್‌ಟಿಐ ಮಾಹಿತಿ ಪ್ರಕಾರ, ‘ಎ’ ಶ್ರೇಣಿಯಲ್ಲಿ ಬರುವ ನಿಲ್ದಾಣಗಳಲ್ಲಿ ತಲಾ ₹1.25 ಲಕ್ಷ ವೆಚ್ಚದಲ್ಲಿ ಹಾಗೂ ‘ಸಿ’ ಶ್ರೇಣಿಯ ನಿಲ್ದಾಣಗಳಲ್ಲಿ ₹6.25 ಲಕ್ಷ ವೆಚ್ಚದಲ್ಲಿ ಕಾಯಂ ಸೆಲ್ಫಿ ಬೂತ್‌ಗಳನ್ನು ಸ್ಥಾಪಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.