ಮಹಾಗಾಮ: ಪ್ರಧಾನಿ ನರೇಂದ್ರ ಮೋದಿಯವರು ಬಿಲಿಯನೇರ್‌ಗಳ ಹಿತಾಸಕ್ತಿಗಳನ್ನು ಪೂರೈಸಲು ದೇಶದಲ್ಲಿನ ಬಡವರ ಹಣವನ್ನು ವ್ಯಯಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಂವಿಧಾನವನ್ನು ರಕ್ಷಿಸಲು ಇಂಡಿಯಾ ಮೈತ್ರಿಕೂಟ ಪ್ರಯತ್ನಿಸುತ್ತಿದ್ದರೆ, ಬಿಜೆಪಿ ಅದನ್ನು ಕಸದ ಬುಟ್ಟಿಗೆ ಹಾಕುವ ಯತ್ನ ಮಾಡುತ್ತಿದೆ. ರಾಹುಲ್ ಗಾಂಧಿ ಕೆಂಪು ಪುಸ್ತಕವನ್ನು (ಸಂವಿಧಾನ ಪುಸ್ತಕ) ತೋರಿಸುತ್ತಿದ್ದಾರೆ ಎಂದು ಮೋದಿ ಹೇಳುತ್ತಾರೆ. ಆ ಪುಸ್ತಕದಲ್ಲಿನ ವಿಷಯ ಮುಖ್ಯವೇ ಹೊರತು ಬಣ್ಣವಲ್ಲ. ಅದನ್ನು ಒಮ್ಮೆಯಾದರೂ ಅವರು ಓದಿದ್ದರೆ ದ್ವೇಷ ಮತ್ತು ಸಮಾಜವನ್ನು ವಿಭಜಿಸುವ ವಿಚಾರಗಳನ್ನು ಬಿತ್ತುತ್ತಿರಲಿಲ್ಲ. ಇದು ಇಂಡಿಯಾ ಒಕ್ಕೂಟ ಮತ್ತು ಬಿಜೆಪಿ–ಆರ್‌ಎಸ್‌ಎಸ್ ನಡುವಿನ ಸಿದ್ಧಾಂತದ ಹೋರಾಟವಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಹಿಂಸಾಚಾರವನ್ನು ಹರಡುತ್ತಿದೆ. ಜತೆಗೆ ಜಾತಿ, ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಲು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.
‘ಮೋದಿಯವರನ್ನು ಅಥವಾ ಅವರ 56 ಇಂಚಿನ ಎದೆಯನ್ನು ನೋಡಿ ಭಯವಾಗುತ್ತಿಲ್ಲ, ಬದಲಾಗಿ ಅವರು ಬಿಲಿಯನೇರ್‌ಗಳ ಕೈಗೊಂಬೆಯಾಗುತ್ತಿರುವುದಕ್ಕೆ ಭಯವಾಗುತ್ತಿದೆ’ ಎಂದರು.
ಜಾತಿಗಣತಿಯು ಏಕೆ ಮುಖ್ಯ ಎಂದು ವಿವರಿಸಿದ ರಾಹುಲ್, ‘ದೇಶದಾದ್ಯಂತ ಜಾತಿಗಣತಿ ನಡೆಸಿದರೆ ದೇಶದ ಚಹರೆಯೇ ಬದಲಾಗಲಿದೆ. ಬುಡಕಟ್ಟು, ದಲಿತ ಮತ್ತು ಒಬಿಸಿಗಳ ಸಮುದಾಯಗಳ ಜನಸಂಖ್ಯೆ ಎಷ್ಟೆಂಬುದು ತಿಳಿಯಲಿದೆ. ಹೀಗಾಗಿ ಜಾತಿಗಣತಿ ಮಾಡಲು ಕಾಂಗ್ರೆಸ್ ಬದ್ಧವಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.