ಸಾಂಗ್ಲಿ(ಮಹಾರಾಷ್ಟ್ರ): ಸಿಂಧುದುರ್ಗ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದ ಘಟನೆಗೆ ಮಾತ್ರವಲ್ಲದೆ ನೋಟು ರದ್ದತಿ, ಜಿಎಸ್‌ಟಿ ಮತ್ತು ರೈತ ವಿರೋಧಿ ಮಸೂದೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
ಆಗಸ್ಟ್ 26 ರಂದು ರಾಜ್‌ಕೋಟ್ ಕೋಟೆಯಲ್ಲಿನ ಪ್ರತಿಮೆ ಕುಸಿದಿರುವುದರಿಂದ 17ನೇ ಶತಮಾನದ ಮಹಾರಾಜ ಶಿವಾಜಿ ಅವರಿಗೆ ಅಗೌರವ ಉಂಟಾಗಿದೆ. ಇದಕ್ಕಾಗಿ ಮೋದಿ ಅವರು ಮಹಾರಾಷ್ಟ್ರದ ಪ್ರತಿ ನಾಗರಿಕರಲ್ಲೂ ಕ್ಷಮೆ ಕೋರಬೇಕು ಎಂದು ರಾಹುಲ್ ಹೇಳಿದ್ದಾರೆ.
ಪಕ್ಷದ ನಾಯಕರಾಗಿದ್ದ ದಿವಂಗತ ಪತಂಗರಾವ್ ಕದಂ ಅವರ ಪ್ರತಿಮೆಯನ್ನು ಉದ್ಘಾಟಿಸಿದ ನಂತರ ಇಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಮಾತನಾಡಿದರು.
ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ-ಎನ್‌ಸಿಪಿ ಸರ್ಕಾರವು ಶಿವಾಜಿ ಮಹಾರಾಜರ ಪ್ರತಿಮೆಯ ಕುಸಿತದಿಂದ ಜನರ ಕೆಂಗಣ್ಣಿಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರು ಈ ಘಟನೆಯಿಂದ ರಾಜ್ಯದ ಜನರ ಭಾವನೆಗಳಿಗೆ ನೋವುಂಟಾಗಿರುವುದಕ್ಕೆ ಶಿವಾಜಿ ಮಹಾರಾಜರ ಅನುಯಾಯಿಗಳ ಕ್ಷಮೆಯಾಚಿಸುವುದಾಗಿ ಹೇಳಿದ್ದರು.
‘ಶಿವಾಜಿ ಪ್ರತಿಮೆ ನಿರ್ಮಾಣದ ಗುತ್ತಿಗೆಯನ್ನು ಯಾವುದೇ ಅರ್ಹತೆ ಇಲ್ಲದ ಆರ್‌ಎಸ್‌ಎಸ್ ವ್ಯಕ್ತಿಗೆ ನೀಡಿದ್ದಕ್ಕಾಗಿ ಅಥವಾ ಈ ಪ್ರಕ್ರಿಯೆಯಲ್ಲಿ ಆಗಿರುವ ಭ್ರಷ್ಟಾಚಾರಕ್ಕಾಗಿ ಕ್ಷಮೆ ಕೋರಿರುವುದೇ ಎಂದು ಪ್ರಧಾನಿಯವರನ್ನು ನಾನು ಪ್ರಶ್ನಿಸಲು ಬಯಸುವೆ’ ಎಂದು ರಾಹುಲ್ ಹೇಳಿದರು.
‘ಎಲ್ಲ ಗುತ್ತಿಗೆಗಳನ್ನು ಅದಾನಿ ಮತ್ತು ಅಂಬಾನಿಗಳಿಗೆ ಏಕೆ ನೀಡಲಾಗಿದೆ ಮತ್ತು ಕೇವಲ ಈ ಇಬ್ಬರಿಗಾಗಿ ಸರ್ಕಾರವನ್ನು ಏಕೆ ನಡೆಸಲಾಗುತ್ತಿದೆ ಎನ್ನುವುದಕ್ಕೂ ಮೋದಿ ಉತ್ತರಿಸಬೇಕು. ‘ಈ ಇಬ್ಬರ’ ಲಾಭಕ್ಕಾಗಿ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಮುಗಿಸಲಾಗುತ್ತಿದೆ. ಅದಾನಿ ಮತ್ತು ಅಂಬಾನಿ ಗುಂಪುಗಳು ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ’ ಎಂದು ಅವರು ವಾಗ್ದಾಳಿ ಮಾಡಿದರು.
ತೀವ್ರ ಪ್ರತಿಭಟನೆಯ ನಂತರ ಹಿಂಪಡೆಯಲಾದ ರೈತ ವಿರೋಧಿ ಮಸೂದೆಗಳಿಗೂ ಪ್ರಧಾನಿ ಕ್ಷಮೆಯಾಚಿಸಿಲ್ಲ. ನೋಟು ರದ್ದತಿ ಮತ್ತು ತಪ್ಪಾದ ಸರಕು ಮತ್ತು ಸೇವಾ ತೆರಿಗೆಗಾಗಿ ಮೋದಿ ಜನರ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.
ಜಾತಿ ಗಣತಿ ಆಗಲೇಬೇಕು: ರಾಹುಲ್
ಜಾತಿ ಗಣತಿಗಾಗಿ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ ರಾಹುಲ್ ಗಾಂಧಿ ಯಾವುದೇ ಬೆಲೆ ತೆತ್ತಾದರೂ ಸರಿ ಜಾತಿ ಗಣತಿ ನಡೆಯುವುದನ್ನು ಕಾಂಗ್ರೆಸ್ ಮತ್ತು ಇಂಡಿಯಾ ಬಣ ಖಚಿತಪಡಿಸಲಿವೆ ಎಂದರು. ದೇಶದ ಸಂಪತ್ತಿನಿಂದ ಯಾರಿಗೆ ಲಾಭವಾಗುತ್ತದೆ ಎಂಬ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ವಿವಿಧ ಸಾಮಾಜಿಕ ಸ್ತರಗಳಲ್ಲಿ ಎಷ್ಟು ಜನರು ಇದ್ದಾರೆ ಮತ್ತು ದೇಶದ ಸಂಪತ್ತು ಹಂಚಿಕೆಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಜಾತಿ ಗಣತಿ ಮಾರ್ಗ ತೋರಲಿದೆ. ಆದರೆ ಬಿಜೆಪಿ ಜಾತಿ ಗಣತಿ ಬೇಡ ಎನ್ನುತ್ತಿದೆ. ಈಗ ಜಾತಿ ಗಣತಿ ಅಗತ್ಯವೆಂದೂ ಆರ್‌ಎಸ್‌ಎಸ್ ಹೇಳುತ್ತಿದೆ ಎಂದು ರಾಹುಲ್ ತಿಳಿಸಿದರು.
ನಾವು ಸಾಮಾಜಿಕ ಪ್ರಗತಿ ಬಯಸುತ್ತೇವೆ ಮತ್ತು ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯುತ್ತೇವೆ. ಆದರೆ ಬಿಜೆಪಿಯು ಆಯ್ದ ಕೆಲವರ ಅಭಿವೃದ್ಧಿ ಬಯಸುತ್ತದೆರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಪ್ರತಿಮೆ ಕುಸಿತದಿಂದ ದೇಶಕ್ಕೆ ಅವಮಾನ: ಖರ್ಗೆ
‘ಶಿವಾಜಿ ಮಹಾರಾಜರ ಪ್ರತಿಮೆ ನೆಲಸಮವಾಗಿರುವುದು ರಾಜ್ಯ ಮತ್ತು ದೇಶಕ್ಕೆ ಮಾಡಿದ ಅವಮಾನವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಕದಂ ಅವರ ಪ್ರತಿಮೆಯನ್ನು ರಾಮ್ ಸುತಾರ್ ಅವರು ನಿರ್ಮಿಸಿದ್ದಾರೆ. ಅವರೊಬ್ಬ ನಿಪುಣ ಶಿಲ್ಪಿ ಎಂದು ಖರ್ಗೆ ಬಣ್ಣಿಸಿದರು. ‘ಮಹಾ ವಿಕಾಸ್ ಅಘಾಡಿ ಮಹಾರಾಷ್ಟ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲು ಸಿದ್ಧವಾಗಿದೆ. ಎಲ್ಲ ನಿಜವಾದ ಎನ್‌ಸಿಪಿ ಮತ್ತು ಶಿವಸೇನೆ ನಾಯಕರು ನಮ್ಮೊಂದಿಗಿದ್ದಾರೆ. ನಕಲಿಗಳು ಇನ್ನೊಂದು ಬದಿಯಲ್ಲಿದ್ದಾರೆ’ ಎಂದು ಹೇಳಿದರು. ಬಿಜೆಪಿ ಮಹಾರಾಷ್ಟ್ರವನ್ನು ಕಳೆದುಕೊಂಡರೆ ಮೋದಿ ಸರ್ಕಾರವೂ ಅಪಾಯಕ್ಕೆ ಸಿಲುಕಲಿದೆ ಎಂದ ಖರ್ಗೆ ಮಹಿಳೆಯರಿಗಾಗಿ ತಂದಿರುವ ‘ಲಡ್ಕಿ ಬಹಿನ್’ ಯೋಜನೆಯಿಂದ ಸರ್ಕಾರವು ಜನರನ್ನು ಮರಳು ಮಾಡಲಾಗದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.