ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಟೀಕಿಸಿರುವ ವಿರೋಧ ಪಕ್ಷಗಳ ನಡೆಯನ್ನು ‘ಬೌದ್ಧಿಕ ಅಪ್ರಾಮಾಣಿಕತೆ’ ಮತ್ತು ‘ರಾಜಕೀಯ ವಂಚನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದಾರೆ.
ದಶಕಗಳ ಹಿಂದೆಯೇ ಕೃಷಿಯ ಪ್ರಯೋಜನಗಳನ್ನು ಪಡೆಯಬೇಕಾಗಿದ್ದ ದೇಶದ ನಾಗರಿಕರಿಗೆ ಅವುಗಳನ್ನು ತಲುಪಿಸಲು ಕಠಿಣ ಮತ್ತು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ಪ್ರಧಾನಿ ಸಮರ್ಥಿಸಿಕೊಂಡಿದ್ದಾರೆ. ‘ರಾಜಕೀಯ ಪಕ್ಷಗಳು ಚುನಾವಣೆಗೆ ಮುನ್ನ ನೀಡಿದ ಭರವಸೆಯನ್ನು ಪೂರೈಸಬೇಕು. ಆದರೆ, ಕೆಲವು ಪಕ್ಷಗಳು ಅಧಿಕಾರಕ್ಕೆ ಬಂದಾಗ ಆ ಕೆಲಸ ಮಾಡುವುದಿಲ್ಲ. ಆ ಪಕ್ಷಗಳು ಪ್ರಸ್ತಾಪಿಸಿದ್ದ ಸುಧಾರಣೆಗಳನ್ನು ಈಗಿನ ಸರ್ಕಾರ ಜಾರಿಗೆ ತಂದಿದೆ. ಆದರೆ, ಅವುಗಳು ತಮ್ಮ ನಿಲುವು ಬದಲಿಸಿಕೊಂಡು ದುರುದ್ದೇಶಪೂರಿತ ತಪ್ಪು ಮಾಹಿತಿ ಹರಡುತ್ತಿರುವುದು ಸರಿಯಲ್ಲ’ ಎಂದು ಅವರು ಹೇಳಿದರು.
‘ಒಪನ್’ ನಿಯತಕಾಲಿಕೆಗೆ ಸಂದರ್ಶನ ನೀಡಿರುವ ಅವರು, ಸರ್ಕಾರ ಜಾರಿಗೊಳಿಸಿದ ಕಾರ್ಮಿಕ ಮತ್ತು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಮೋದಿ ಸರ್ಕಾರ ಜಾರಿಗೆ ತಂದಿರುವ ಇದೇ ರೀತಿಯ ಕೃಷಿ ಸುಧಾರಣೆಗಳ ಭರವಸೆ ನೀಡಿದ್ದವು. ಆದರೆ ಈಗ ಸ್ವಾರ್ಥ ರಾಜಕೀಯ ಕಾರಣಗಳಿಗಾಗಿ ಹೊಸ ಕಾನೂನುಗಳ ವಿರುದ್ಧ ಪ್ರತಿಭಟನೆಗಳನ್ನು ಬೆಂಬಲಿಸುತ್ತಿವೆ ಎಂದು ಆಡಳಿತಾರೂಢ ಬಿಜೆಪಿ ಆರೋಪಿಸಿದೆ.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ರೈತರ ಕೆಲವು ಗುಂಪುಗಳು ಕೇಂದ್ರದ ಕಾಯ್ದೆಗಳನ್ನು ವಿರೋಧಿಸಿ 10 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿವೆ. ಕಾಯ್ದೆ ಜಾರಿಯನ್ನು ತಡೆಹಿಡಿಯಲಾಗಿದೆ.
‘ಭಿನ್ನಾಭಿಪ್ರಾಯ ಇರುವ ವಿಷಯಗಳ ಬಗ್ಗೆ ರೈತ ಸಂಘಟನೆಗಳ ಜೊತೆ ಕುಳಿತು ಮಾತುಕತೆ ನಡೆಸಲು ಸದಾ ಸಿದ್ಧ ಎಂದು ಸರ್ಕಾರವು ಆರಂಭದ ದಿನದಿಂದಲೂ ಹೇಳುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಅನೇಕ ಸಭೆಗಳನ್ನು ಸಹ ನಡೆಸಲಾಗಿದೆ. ಆದರೆ ಯಾವ ವಿಷಯದಲ್ಲಿ ಬದಲಾವಣೆ ಆಗಬೇಕಿದೆ ಎಂಬ ಬಗ್ಗೆ ಇಲ್ಲಿಯವರೆಗೆ ಯಾರೂ ನಿರ್ದಿಷ್ಟ ಅಭಿಪ್ರಾಯ ವ್ಯಕ್ತಪಡಿಸಿಲ್ಲ’ ಎಂದು ಅವರು ಹೇಳಿದರು.
ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರವನ್ನು ಟೀಕಿಸಿದ್ದ ಪ್ರತಿಪಕ್ಷಗಳನ್ನು ಅವರು ತರಾಟೆಗೆ ತೆಗೆದುಕೊಂಡರು. ಮುಂದುವರಿದ ದೇಶಗಳಿಗಿಂತ ಭಾರತವು ಕೋವಿಡ್ ನಿರ್ವಹಣೆಯಲ್ಲಿ ಗಮನಾರ್ಹ ಪ್ರಗತಿ ದಾಖಲಿಸಿದೆ ಎಂದು ಪ್ರತಿಪಾದಿಸಿದರು. ತಮ್ಮ ಸರ್ಕಾರ ಜಾರಿಗೆ ತಂದಿರುವ ಜನಕಲ್ಯಾಣ ಕಾರ್ಯಕ್ರಮಗಳನ್ನು ಅವರು ಸಂದರ್ಶನದಲ್ಲಿ ವಿವರಿಸಿದರು.
‘ವಿಮರ್ಶೆ, ಟೀಕೆಯನ್ನು ನಾನು ಬಹುವಾಗಿ ಗೌರವಿಸುತ್ತೇನೆ. ಆದರೆ, ವಿಮರ್ಶಕರ ಸಂಖ್ಯೆಯೇ ಕಡಿಮೆ ಇದ್ದು, ಆರೋಪ ಮಾಡುವವರೇ ಬಹಳಷ್ಟು ಜನರಿದ್ದಾರೆ. ವಿಮರ್ಶೆ ಮಾಡಬೇಕೆಂದರೆ ಕಠಿಣಶ್ರಮ, ಸಂಶೋಧನೆ ಅಗತ್ಯ. ಇಂದಿನ ವೇಗದ ಜಗತ್ತಿನಲ್ಲಿ ಜನರಿಗೆ ಬಹುಶಃ ಅದಕ್ಕೆ ಸಮಯ ಸಿಕ್ಕಿರಲಿಕ್ಕಿಲ್ಲ. ಹೀಗಾಗಿ, ಕೆಲವು ಸಂದರ್ಭದಲ್ಲಿ ನನಗೆ ಅಂಥ ಅಂಥ ವಿಮರ್ಶಕರು ಸಿಗುವುದಿಲ್ಲ’ ಎಂದು ಹೇಳಿದ್ದಾರೆ.
‘ಕತ್ತಿಯ ಅಲಗಿನ ಮೇಲಿನ ನಡಿಗೆ’
ತಮ್ಮ ಅಧಿಕಾರಾವಧಿಯ 20ಕ್ಕೂ ಹೆಚ್ಚು ವರ್ಷಗಳಲ್ಲಿ ಜನರಿಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಗಳ ಜೊತೆ ಮುಖಾಮುಖಿಯಾಗುವಲ್ಲಿ ಹಾಗೂ ಯೋಜನೆಗಳನ್ನು ರೂಪಿಸುವಲ್ಲಿ ತಮ್ಮದು ಕತ್ತಿಯ ಅಲಗಿನ ಮೇಲಿನ ನಡೆಯಾಗಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
‘ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಾಗ, ಪ್ರಧಾನಿ ತಮ್ಮನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಜನರು ಭಾವಿಸುತ್ತಾರೆ. ಪ್ರಧಾನಿಯೂ ತಮ್ಮೊಳಗಿನ ಒಬ್ಬರು ಎಂದು ಸಾಮಾನ್ಯ ಜನರು ಪರಿಗಣಿಸಿದ್ದಾರೆ’ ಎಂದು ಮೋದಿ ಹೇಳಿದರು.
‘ನಾನು ಅಧಿಕಾರಕ್ಕೆ ಬಂದಾಗ ಜನರಿಗೆ ಮೂರು ಭರವಸೆ ನೀಡಿದ್ದೆ. ನಾನು ನನಗಾಗಿ ಏನನ್ನೂ ಮಾಡುವುದಿಲ್ಲ. ನಾನು ತಪ್ಪು ಉದ್ದೇಶದಿಂದ ಏನನ್ನೂ ಮಾಡುವುದಿಲ್ಲ. ನಾನು ಕಠಿಣ ಪರಿಶ್ರಮದ ಹೊಸ ಮಾದರಿಯನ್ನು ರಚಿಸುತ್ತೇನೆ ಎಂದು. ನನ್ನ ವೈಯಕ್ತಿಕ ಬದ್ಧತೆಯನ್ನು ಜನರು ಇಂದಿಗೂ ನೋಡುತ್ತಿದ್ದಾರೆ’ ಎಂದು ಪ್ರಧಾನಿ ಹೇಳಿದರು.
‘ದೇಶವನ್ನು ಗೆಲ್ಲಿಸೋಣ’:ಭಾರತದ ರಾಜಕೀಯದಲ್ಲಿ ಒಂದು ಮಾದರಿ ಇದೆ. ಮುಂದಿನ ಸರ್ಕಾರವನ್ನು ರಚಿಸುವುದಕ್ಕಾಗಿ ಹಾಲಿ ಸರ್ಕಾರವನ್ನು ನಡೆಸಲಾಗುತ್ತದೆ. ಆದರೆ, ತಮ್ಮ ಮೂಲಭೂತ ಚಿಂತನೆ ವಿಭಿನ್ನವಾಗಿದ್ದು, ‘ರಾಷ್ಟ್ರವನ್ನು ಕಟ್ಟಲು ಸರ್ಕಾರ ನಡೆಸಬೇಕು’ ಎಂದು ಪ್ರಧಾನಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.