ನವದೆಹಲಿ: ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಮತ್ತು ಕೃಷಿಕರ ಮಾಹಿತಿಗಾಗಿ ಇ–ಗೋಪಾಲ ಆ್ಯಪ್‌ಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಡಿಜಿಟಲ್ ವೇದಿಕೆಯ ಮೂಲಕ ಚಾಲನೆ ನೀಡಲಿದ್ದಾರೆ.
ಬಿಹಾರದಲ್ಲಿನ ಮೀನುಗಾರಿಕೆ ಮತ್ತು ಪಶು ಸಂಗೋಪನೆ ವಲಯಗಳಿಗೆ ಸಂಬಂಧಿಸಿದ ಮತ್ತಷ್ಟು ಯೋಜನೆಗಳನ್ನು ಪ್ರಧಾನಿ ಘೋಷಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಹೇಳಿದೆ. ಬಿಹಾರದಲ್ಲಿ ಅಕ್ಟೋಬರ್–ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಮೀನುಗಾರಿಕೆ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗಾಗಿಯೇ 'ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ' ಮೂಲಕ 2020–21ರಿಂದ 2024–25ರ ವರೆಗೂ ಅಂದಾಜು ₹20,050 ಕೋಟಿ ಹೂಡಿಕೆಯಾಗಲಿದೆ. ಇದು ಮೀನುಗಾರಿಕೆ ವಲಯಕ್ಕೆ ಈವರೆಗಿನ ಅತಿ ದೊಡ್ಡ ಮೊತ್ತದ ಹೂಡಿಕೆಯಾಗಲಿದೆ.
ತಳಿ ಅಭಿವೃದ್ಧಿ ಮತ್ತು ಇತರೆ ಮಾಹಿತಿಗಳನ್ನು ಒಳಗೊಂಡ ಅಪ್ಲಿಕೇಷನ್ 'ಇ–ಗೋಪಾಲ', ಅದನ್ನು ರೈತರು ನೇರವಾಗಿ ಬಳಸಬಹುದಾಗಿದೆ. ಪಶುಗಳಿಗೆ ಲಸಿಕೆ ಹಾಕಿಸುವ ದಿನಾಂಕ, ಅವುಗಳಿಗೆ ನೀಡಬೇಕಾದ ಪೌಷ್ಠಿಕಾಂಶ ಆಹಾರದ ಬಗ್ಗೆ ತಿಳಿವಳಿಕೆ, ಸೂಕ್ತ ಔಷಧಿ ನೀಡಿ ಅವುಗಳ ಆರೈಕೆ ಸೇರಿದಂತೆ ಕೃಷಿಕರಿಗೆ ಅಗತ್ಯವಿರುವ ಎಲ್ಲ ಮಾಹಿತಿ ಆ್ಯಪ್‌ನಲ್ಲಿ ಸಿಗಲಿದೆ. ಈ ಕುರಿತು ಪ್ರಧಾನಿ ಟ್ವಿಟರ್ ಖಾತೆಯೂ ಟ್ವೀಟಿಸಿದೆ.
ಬಿಹಾರದಲ್ಲಿ ₹1,390 ಕೋಟಿ ಮೊತ್ತದ ಯೋಜನೆಗಳಿಗೆ ಕೇಂದ್ರದಿಂದ ₹535 ಕೋಟಿ ಸಹಕಾರ ದೊರೆಯಲಿದೆ. ಮೀನು ಉತ್ಪಾದನೆ ಹೆಚ್ಚಳಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ. ನೀರು ಮತ್ತು ಮಣ್ಣಿನ ಪರೀಕ್ಷೆ, ರೋಗ ಪರೀಕ್ಷೆ ಕೇಂದ್ರಗಳ ಮೂಲಕ ಮೀನುಗಾರರಿಗೆ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ 2024–25ರ ವೇಳೆಗೆ ಹೆಚ್ಚುವರಿಯಾಗಿ 70 ಲಕ್ಷ ಟನ್ ಮೀನುಗಾರಿಕೆ ಉತ್ಪನ್ನ ಸಾಧ್ಯವಾಗಿಸಿ, ರಫ್ತು ಹೆಚ್ಚಿಸುವ ಗುರಿ ಹೊಂದಿದೆ. ಮೀನುಗಾರರು ಮತ್ತು ಮೀನು ಸಾಕಣೆಗಾರರ ಆದಾಯ ದುಪ್ಪಟ್ಟುಗೊಳಿಸುವ ಜೊತೆಗೆ ಮತ್ಸ್ಯ ಉತ್ಪನ್ನಗಳ ರಫ್ತಿನಿಂದ ₹1,00,000 ಕೋಟಿ ಗಳಿಕೆಯನ್ನು ಸರ್ಕಾರ ಎದುರು ನೋಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.