ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ (ಪಿಎಂ–ಕಿಸಾನ್) 18ನೇ ಕಂತಿನ ₹20 ಸಾವಿರ ಕೋಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು, ಶನಿವಾರ ಬಿಡುಗಡೆ ಮಾಡಲಿದ್ದಾರೆ.
ದೇಶದ 9.4 ಕೋಟಿಗೂ ಹೆಚ್ಚು ರೈತರಿಗೆ ಈ ಯೋಜನೆಯಡಿ ಸೌಲಭ್ಯ ಸಿಗಲಿದೆ. ಮಹಾರಾಷ್ಟ್ರದ ವಾಶಿಮ್‌ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಗೆ (ಡಿಬಿಟಿ) ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
ಮಹಾರಾಷ್ಟ್ರದ ರೈತರು ನಮೋ ಶೆಟ್ಕರಿ ಮಹಾಸನ್ಮಾನ್ ನಿಧಿಯಡಿ ಹೆಚ್ಚುವರಿಯಾಗಿ ₹2 ಸಾವಿರ ಕೋಟಿ ಪಡೆಯಲಿದ್ದಾರೆ.
17 ಕಂತುಗಳಲ್ಲಿ ಮಹಾರಾಷ್ಟ್ರಕ್ಕೆ ಅಂದಾಜು ₹32 ಸಾವಿರ ಕೋಟಿ ಲಭಿಸಿದೆ. 1.20 ಕೋಟಿ ರೈತರು ಇದರ ಫಲಾನುಭವಿಗಳಾಗಿದ್ದಾರೆ. 18ನೇ ಕಂತಿನಲ್ಲಿ 91 ಲಕ್ಷಕ್ಕೂ ಹೆಚ್ಚು ರೈತರಿಗೆ ₹1,900 ಕೋಟಿ ನೀಡಲಾಗುವುದು ಎಂದು ತಿಳಿಸಿದೆ.
2019ರ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರವು ಪಿಎಂ–ಕಿಸಾನ್ ಯೋಜನೆಗೆ ಚಾಲನೆ ನೀಡಿತ್ತು. ವಾರ್ಷಿಕವಾಗಿ ಮೂರು ಸಮಾನ ಕಂತಿನಲ್ಲಿ ಒಟ್ಟು ₹6 ಸಾವಿರ ಮೊತ್ತವು ರೈತರಿಗೆ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.