ನವದೆಹಲಿ : ದ್ವಿಪಕ್ಷೀಯ ಸಂಬಂಧ ಬಲಪಡಿಸುವ ಉದ್ದೇಶದಿಂದ ಭಾರತ ಮತ್ತು ಮಾಲ್ಡೀವ್ಸ್ ಸೋಮವಾರ ಹಲವು ಒಪ್ಪಂದಗಳಿಗೆ ಸಹಿ ಹಾಕಿದವು. ಈ ಮೂಲಕ ದ್ವೀಪರಾಷ್ಟ್ರದ ಜತೆಗಿನ ತನ್ನ ಸ್ನೇಹ ಸಂಬಂಧ ಮುಂದುವರಿಯಲಿದೆ ಎಂದು ಭಾರತ ಪ್ರತಿಪಾದಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಸಮಗ್ರ ಆರ್ಥಿಕ ಹಾಗೂ ಜಲಸಾರಿಗೆ ಸಹಕಾರಕ್ಕಾಗಿ ಹೊಸ ನೀಲನಕ್ಷೆಯೊಂದನ್ನು ಸೋಮವಾರ ಅನಾವರಣಗೊಳಿಸಿದರು.
ಐದು ದಿನಗಳ ಭೇಟಿಗೆ ಭಾರತಕ್ಕೆ ಬಂದಿರುವ ಮುಯಿಜು ಅವರು ಸೋಮವಾರ ಇಲ್ಲಿನ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಿದರು. ಮಾಲ್ದೀವ್ಸ್‌ನಲ್ಲಿ ಬಂದರು, ರಸ್ತೆ, ಶಾಲೆಗಳು ಮತ್ತು ವಸತಿಗಳನ್ನು ನಿರ್ಮಿಸಲು ತನ್ನ ಸಹಕಾರ ಮುಂದುವರಿಸಲು ಭಾರತ ಒಪ್ಪಿಕೊಂಡಿದೆ.
‘ಭಾರತ ಮತ್ತು ಮಾಲ್ಡೀವ್ಸ್ ನಡುವಣ ಆರ್ಥಿಕ ಸಹಕಾರ ಮತ್ತಷ್ಟು ಬಲಪಡಿಸಲು ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಚರ್ಚೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ’ ಎಂದು ಮೋದಿ ಹೇಳಿದರು.
‘ನಾವು ಮಾಲ್ದೀವ್ಸ್‌ನಲ್ಲಿ ರುಪೇ ಕಾರ್ಡ್ ಸೇವೆಯನ್ನು ಪ್ರಾರಂಭಿಸಿದ್ದೇವೆ. ಮುಂಬರುವ ದಿನಗಳಲ್ಲಿ ಭಾರತ – ಮಾಲ್ದೀವ್ಸ್‌ಅನ್ನು ಯುಪಿಐ ಮೂಲಕ ಜೋಡಿಸುವ ಕೆಲಸ ಮಾಡುತ್ತೇವೆ’ ಎಂದರು.
ಭಾನುವಾರ ನವದೆಹಲಿಗೆ ಬಂದ ಮುಯಿಜು ಅವರಿಗೆ ಸೋಮವಾರ ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ಸ್ವಾಗತ ಸಮಾರಂಭ ಆಯೋಜಿಸಲಾಯಿತು. ಪ್ರಧಾನಿ ಮೋದಿ ಅವರೂ ಪಾಲ್ಗೊಂಡರು.
ಮುಯಿಜು ಅವರು ಮಂಗಳವಾರದಂದು ಆಗ್ರಾ ಮತ್ತು ಮುಂಬೈಗೆ ಹಾಗೂ ಬುಧವಾರ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.
ಚೀನಾ ಪರ ಒಲವು ಹೊಂದಿರುವ ಮುಯಿಜು ಅವರು ಕಳೆದ ವರ್ಷದ ನವೆಂಬರ್‌ನಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತ– ಮಾಲ್ದೀವ್ಸ್ ಸಂಬಂಧ ಹದಗೆಟ್ಟಿತ್ತು. ಮಾಲ್ದೀವ್ಸ್‌ನಲ್ಲಿ ನಿಯೋಜಿಸಿದ್ದ ತನ್ನ ಸೈನಿಕರನ್ನು ಭಾರತ, ಈ ವರ್ಷದ ಮೇ ತಿಂಗಳಲ್ಲಿ ವಾಪಸ್ ಕರೆಸಿಕೊಂಡಿತ್ತು. ಮಾಲ್ದೀವ್ಸ್‌ನ ಸಚಿವರು ಮೋದಿ ವಿರೋಧಿ ಹೇಳಿಕೆ ನೀಡಿದ್ದು ಕೂಡಾ ವಿವಾದಕ್ಕೆ ಕಾರಣವಾಗಿತ್ತು.
ಸಾಲ ನೀಡಲು ಒಪ್ಪಿಗೆ
ಮಾಲ್ದೀವ್ಸ್‌ಗೆ ಅಮೆರಿಕನ್ ಡಾಲರ್‌ನಲ್ಲಿ 40 ಕೋಟಿ (ಸುಮಾರು ₹3360 ಕೋಟಿ) ಹಾಗೂ ಭಾರತದ ರೂಪಾಯಿಯಲ್ಲಿ 3 ಸಾವಿರ ಕೋಟಿ ಸಾಲ ನೀಡಲು ಭಾರತ ಒಪ್ಪಿಕೊಂಡಿದೆ. ದ್ವೀಪ ರಾಷ್ಟ್ರವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡುವ ಉದ್ದೇಶದಿಂದ ಈ ಹೆಜ್ಜೆಯಿಡಲಾಗಿದೆ. ‘ವಿದೇಶಿ ವಿನಿಮಯಕ್ಕೆ ಸಂಬಂಧಿಸಿದಂತೆ ನಾವು ಈಗ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಈ ಒಪ್ಪಂದ ನೆರವಾಗಲಿದೆ. ಇದಕ್ಕಾಗಿ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಮುಯಿಜು ಹೇಳಿದರು.
ಬೆಂಗಳೂರಿನಲ್ಲಿ ಮಾಲ್ದೀವ್ಸ್ ಕಾನ್ಸುಲೇಟ್
ಮಾಲ್ದೀವ್ಸ್‌ನ ಅದ್ದುನಲ್ಲಿ ಭಾರತದ ಕಾನ್ಸುಲೇಟ್ ಹಾಗೂ ಬೆಂಗಳೂರಿನಲ್ಲಿ ಮಾಲ್ದೀವ್ಸ್ ಕಾನ್ಸುಲೇಟ್ ಕಚೇರಿ ಆರಂಭಿಸುವ ಬಗ್ಗೆ ಚರ್ಚೆ ನಡೆಯಿತು.
ಮಾಲ್ದೀವ್ಸ್‌ನ ನವೀಕೃತ ಹಾನಿಮಾದೂ ವಿಮಾನ ನಿಲ್ದಾಣವನ್ನು ಮೋದಿ ಹಾಗೂ ಮುಯಿಜು ವರ್ಚುವಲ್ ಆಗಿ ಉದ್ಘಾಟಿಸಿದರು.
ತಿಲಾಫುಶಿಯಲ್ಲಿ ಹೊಸ ಬಂದರು ನಿರ್ಮಾಣಕ್ಕೆ ಭಾರತದ ನೆರವು
ಮಾಲ್ದೀವ್ಸ್ ಎಕನಾಮಿಕ್ ಗೇಟ್‌ವೇ ಯೋಜನೆಗೆ ಪರಸ್ಪರ ಸಹಭಾಗಿತ್ವಕ್ಕೆ ಒಪ್ಪಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.