ನವದೆಹಲಿ: ಯುದ್ಧ ಪೀಡಿತ ಉಕ್ರೇನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆ. 23ರಂದು ಭೇಟಿ ನೀಡಲಿದ್ದಾರೆ.
‘ಈ ಭೇಟಿಯು ಯುದ್ಧ ಪೀಡಿತ ರಾಷ್ಟ್ರದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಮಾರ್ಗೋಪಾಯವನ್ನು ಕಂಡುಕೊಳ್ಳುವುದಾಗಿದೆ’ ಎಂದು ಅವರು ಹೇಳಿದ್ದಾರೆ.
‘ತಮ್ಮ ಭೇಟಿಯ ಸಂದರ್ಭದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ. ರಾಜತಾಂತ್ರಿಕತೆ ಹಾಗೂ ಮಾತುಕತೆ ಮೂಲಕ ಉಕ್ರೇನ್‌ನಲ್ಲಿನ ಬಿಕ್ಕಟ್ಟು ಶಮನಕ್ಕೆ ಭಾರತ ಸದಾ ಬೆಂಬಲ ನೀಡಲಿದೆ’ ಎಂದು ವಿದೇಶಾಂಗ ಸಚಿವಾಲಯದ ಪಶ್ಚಿಮ ವಿಭಾಗದ ಕಾರ್ಯದರ್ಶಿ ತನ್ಮಯಾ ಲಾಲ್ ಹೇಳಿದ್ದಾರೆ.
‘ಭಾರತವು ರಷ್ಯಾ ಮತ್ತು ಉಕ್ರೇನ್‌ನೊಂದಿಗೆ ಸಮಾನ ಸಂಬಂಧವನ್ನು ಹೊಂದಿದೆ. ಉಕ್ರೇನ್ ಪ್ರವಾಸಕ್ಕೂ ಮೊದಲು ಪ್ರಧಾನಿ ಮೋದಿ ಅವರು ಪೊಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ’ ಎಂದಿದ್ದಾರೆ.
ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲೇ ರಷ್ಯಾ ರಾಜಧಾನಿ ಮಾಸ್ಕೊಗೆ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಈ ಕುರಿತು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದ ಝೆಲೆನ್‌ಸ್ಕಿ, ಮೋದಿಯವರ ಮಾಸ್ಕೊ ಭೇಟಿಯನ್ನು ‘ದೊಡ್ಡ’ ನಿರಾಸೆ ಮತ್ತು ಶಾಂತಿ ಪ್ರಯತ್ನಗಳಿಗೆ ‘ವಿನಾಶಕಾರಿ ಹೊಡೆತ’ ಬಿದ್ದಿದೆ ಎಂದು ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಕ್ಷಿಪಣಿ ದಾಳಿ ಬಗ್ಗೆ ಉಲ್ಲೇಖಿಸಿದ್ದರು.
‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕ ಮಾಸ್ಕೊದಲ್ಲಿ ವಿಶ್ವದ ಅತ್ಯಂತ ರಕ್ತಸಿಕ್ತ ಅಪರಾಧಿಯನ್ನು ತಬ್ಬಿಕೊಳ್ಳುವುದನ್ನು ನೋಡಲು ಬೇಸರವಾಗುತ್ತಿದೆ. ಶಾಂತಿಯ ಪ್ರಯತ್ನಗಳಿಗೆ ಭಾರಿ ನಿರಾಸೆ ಮೂಡಿಸುವುದರ ಜತೆಗೆ ವಿನಾಶಕಾರಿ ಹೊಡೆತ ಬಿದ್ದಂತಾಗಿದೆ’ ಎಂದು ಎಂದು ಬೇಸರ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.