ADVERTISEMENT

ಅರುಣಾಚಲ ಪ್ರದೇಶ | 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ವಾರ್ಡನ್‌ಗೆ ಮರಣದಂಡನೆ

ಪಿಟಿಐ
Published 28 ಸೆಪ್ಟೆಂಬರ್ 2024, 11:20 IST
Last Updated 28 ಸೆಪ್ಟೆಂಬರ್ 2024, 11:20 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಇಟಾನಗರ (ಅರುಣಾಚಲ ಪ್ರದೇಶ): ವಸತಿ ಶಾಲೆಯ 15 ಬಾಲಕಿಯರು ಸೇರಿದಂತೆ 21 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯೊಬ್ಬನಿಗೆ ಅರುಣಾಚಲ ಪ್ರದೇಶದ ಯುಪಿಯಾ ವಿಶೇಷ ಪೋಕ್ಸೊ ನ್ಯಾಯಾಲಯ ಮರಣದಂಡನೆ ವಿಧಿಸಿ ಆದೇಶಿಸಿದೆ.

ಅಲ್ಲದೇ ಪ್ರಕರಣದಲ್ಲಿ ಭಾಗಿಯಾದ ಇತರ ಇಬ್ಬರಿಗೆ ತಲಾ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.

ADVERTISEMENT

ಯುಮ್ಕೆನ್ ಬಾಗ್ರಾ ಮರಣದಂಡನೆಗೆ ಗುರಿಯಾದ ಅಪರಾಧಿ. ಈತ ಶಿ-ಯೋಮಿ ಜಿಲ್ಲೆಯ ಕರೋ ಸರ್ಕಾರಿ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ವಾರ್ಡನ್ ಆಗಿದ್ದ. 2019 ಮತ್ತು 2022ರ ನಡುವೆ 6 ರಿಂದ 15 ವರ್ಷದೊಳಗಿನ 15 ಬಾಲಕಿಯರು ಸೇರಿದಂತೆ 21 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.

ಸಹ-ಆರೋಪಿಗಳಾದ ಮಾರ್ಬೊಮ್ ನ್ಗೊಮ್ದಿರ್ ಹಿಂದಿ ಶಿಕ್ಷಕರಾಗಿದ್ದು, ಸಿಂಗ್ತುನ್ ಯೋರ್ಪೆನ್ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದರು ಎಂದು ಎಸ್‌ಪಿ ರೋಹಿತ್ ರಾಜ್ಬೀರ್ ಸಿಂಗ್ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 328 ಮತ್ತು 506 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ( ಪೋಕ್ಸೊ ) ಕಾಯಿದೆಯ ಸೆಕ್ಷನ್ 6, 10, ಮತ್ತು 12 ರ ಅಡಿಯಲ್ಲಿ ಬಾಗ್ರಾನನ್ನು ಅಪರಾಧಿ ಎಂದು ಘೋಷಿಸಿ, ಮರಣದಂಡನೆ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ:

ಕಳೆದ ವರ್ಷ ನವೆಂಬರ್ 2 ರಂದು ಇಬ್ಬರು ಸಹೋದರಿಯರು ಲೈಂಗಿಕ ದೌರ್ಜನ್ಯದ ಬಗ್ಗೆ ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದರು. 2 ದಿನಗಳ ಬಳಿಕ ಜಿಲ್ಲೆಯ ಮೊನಿಗಾಂಗ್ ಪೊಲೀಸ್ ಠಾಣೆಗೆ ಎಫ್‌ಐಆರ್ ದಾಖಲಿಸಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಬಾಗ್ರಾ ಪರಾರಿಯಾಗಿದ್ದ. ಕಳೆದ ವರ್ಷ ನವೆಂಬರ್‌ನಲ್ಲಿ ಆತನನ್ನು ಬಂಧಿಸಲಾಗಿತ್ತು.

2024ರ ಜುಲೈ 21 ರಂದು ಗುವಾಹಟಿ ಹೈಕೋರ್ಟ್‌ನ ಇಟಾನಗರ ಪೀಠವು ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಬಾಗ್ರಾಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.