ADVERTISEMENT

‘ವರವರ ರಾವ್‌ಗೆ ಉತ್ತಮ ಚಿಕಿತ್ಸೆ ನೀಡುತ್ತಿಲ್ಲ’

ಹ್ಯೂಮನ್ ರೈಟ್ಸ್‌ ಡಿಫೆಂಡರ್ಸ್‌ ಅಲೆರ್ಟ್ ಆರೋಪ * ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಮತ್ತೆ ದೂರು

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 20:24 IST
Last Updated 16 ಜುಲೈ 2020, 20:24 IST
ವರವರ ರಾವ್
ವರವರ ರಾವ್   

ಮುಂಬೈ: ಎಲ್ಗಾರ್‌ ಪರಿಷತ್‌‌ ಮತ್ತು ನಕ್ಸಲರ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ನವಿ ಮುಂಬೈನ ಜೈಲಿನಲ್ಲಿ ಇರುವ ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ವರವರ ರಾವ್ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹ್ಯೂಮನ್ ರೈಟ್ಸ್‌ ಡಿಫೆಂಡರ್ಸ್‌ ಅಲರ್ಟ್ (ಎಚ್‌ಆರ್‌ಡಿಎ)‌ ಸಂಘಟನೆಯು ಆರೋಪಿಸಿದೆ.

ವರವರ ರಾವ್ ಅವರ ಆರೋಗ್ಯದಲ್ಲಿ ಭಾರಿ ಏರುಪೇರಾಗಿದ್ದು, ಉತ್ತಮ ಚಿಕಿತ್ಸೆ ಕೊಡಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತಕ್ಷಣವೇ ಸೂಚಿಸಬೇಕು ಎಂದು ಸಂಘಟನೆಯು ಒತ್ತಾಯಿಸಿದೆ.

ನವಿ ಮುಂಬೈನ ತಲೋಜಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ ವರವರ ರಾವ್ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಕಳೆದ ವಾರವಷ್ಟೇ ಅವರನ್ನು ಮುಂಬೈನ ಜೆ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾವ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದ ಕುಟುಂಬದ ಸದಸ್ಯರು, ‘ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಅವರು ಇದ್ದ ಆಸ್ಪತ್ರೆಯ ವಾರ್ಡ್‌ನ ನೆಲದಲ್ಲಿ ಮೂತ್ರ ಹರಿಯುತ್ತಿದೆ. ರಾವ್ ಅವರನ್ನು ನೋಡಿಕೊಳ್ಳಲು ಸಿಬ್ಬಂದಿಯೂ ಇಲ್ಲ’ ಎಂದು ಆರೋಪಿಸಿದ್ದರು.

ADVERTISEMENT

ಈ ಸಂಬಂಧ ಜುಲೈ 13ರಂದು ಮಾನವ ಹಕ್ಕುಗಳ ಆಯೋಗಕ್ಕೆ ಎಚ್‌ಆರ್‌ಡಿಎ ಪತ್ರ ಬರೆದಿತ್ತು. ‘ಪತ್ರಕ್ಕೆ ತಕ್ಷಣವೇ ಸ್ಪಂದಿಸಿದ ಆಯೋಗವು, ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ರಾವ್ ಅವರ ಆರೋಗ್ಯದ ಮೇಲ್ವಿಚಾರಣೆಗೆ ತಕ್ಷಣವೇ ವೈದ್ಯಕೀಯ ಸಮಿತಿಯನ್ನು ರಚಿಸಿ. ಅಗತ್ಯ ಚಿಕಿತ್ಸೆ ಕೊಡಿಸಿ. ತುರ್ತು ಸೇವೆಗಳು ಲಭ್ಯವಿರುವ ಆಸ್ಪತ್ರೆಗೆ ಅವರನ್ನು ವರ್ಗಾಯಿಸಿ ಎಂದು ಆಯೋಗವು ಸೂಚನೆ ನೀಡಿತ್ತು’ ಎಂದು ಎಚ್‌ಆರ್‌ಡಿಎ ಹೇಳಿದೆ.

‘ರಾವ್ ಅವರ ಆರೋಗ್ಯದ ಬಗ್ಗೆ ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ಎರಡು ವಾರದ ಒಳಗೆ ವರದಿ ನೀಡಿ ಎಂದೂ ಆಯೋಗವು ಸೂಚಿಸಿತ್ತು’ ಎಂದು ಎಚ್‌ಆರ್‌ಡಿಎ ಹೇಳಿದೆ.

ರಾವ್ ಅವರಿಗೆ ಕೋವಿಡ್‌
ಆಸ್ಪತ್ರೆಗೆ ದಾಖಲಿಸಿದ ನಂತರ ವರವರ ರಾವ್ ಅವರನ್ನು ಕೋವಿಡ್‌ ತಪಾಸಣೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯ ವರದಿ ಗುರುವಾರ ಬಂದಿದೆ. ರಾವ್ ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ.

**

ಆಯೋಗವು ಸೂಚನೆ ನೀಡಿ ಮೂರು ದಿನ ಕಳೆದಿದ್ದರೂ, ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಆಯೋಗವು ತಕ್ಷಣವೇ ಮಧ್ಯಪ್ರವೇಶಿಸಬೇಕು.
-ಎಚ್‌ಆರ್‌ಡಿಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.