ADVERTISEMENT

ಮುಖ್ತಾರ್ ಅನ್ಸಾರಿಗೆ ವಿಷಪೂರಿತ ಆಹಾರ

ಅಗತ್ಯ ವೈದ್ಯಕೀಯ ಸೇವೆಯೂ ನಿರಾಕರಣೆ: ಮುಖ್ತಾರ್ ಅನ್ಸಾರಿ ಪುತ್ರ ಸುಪ್ರೀಂಗೆ ಅರಿಕೆ

ಪಿಟಿಐ
Published 15 ಜುಲೈ 2024, 14:48 IST
Last Updated 15 ಜುಲೈ 2024, 14:48 IST
ಮುಖ್ತಾರ್ ಅನ್ಸಾರಿ
ಮುಖ್ತಾರ್ ಅನ್ಸಾರಿ   

ನವದೆಹಲಿ: ‘ನನ್ನ ತಂದೆ ಮುಖ್ತಾರ್ ಅನ್ಸಾರಿ ಅವರಿಗೆ ಕಾರಾಗೃಹದಲ್ಲಿ ವಿಷಪೂರಿತ ಆಹಾರ ಪೂರೈಸಲಾಗಿದೆ. ಅಲ್ಲದೆ, ಅವರಿಗೆ ಅಗತ್ಯವಿದ್ದ ವೈದ್ಯಕೀಯ ಸೇವೆಯನ್ನು ನಿರಾಕರಿಸಲಾಗಿತ್ತು. ಇದರಿಂದಾಗಿಯೇ ನನ್ನ ತಂದೆ ಕಾರಾಗೃಹದಲ್ಲಿ ಮೃತಪಟ್ಟರು’

–ಹೀಗೆಂದು ಗ್ಯಾಂಗ್‌ಸ್ಟರ್ ಹಾಗೂ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಅವರ ಮಗ ಉಮರ್ ಅನ್ಸಾರಿ ಸುಪ್ರೀಂ ಕೋರ್ಟ್‌ ಮುಂದೆ ಹೇಳಿದ್ದಾರೆ. 

ಮುಖ್ತಾರ್ ಅನ್ಸಾರಿ ಅವರನ್ನು ಇರಿಸಲಾಗಿದ್ದ ಬಾಂದಾ ಕಾರಾಗೃಹದಲ್ಲಿ ಭದ್ರತೆ ಮತ್ತು ಸುರಕ್ಷತೆ ಪ್ರಶ್ನಿಸಿ ಅವರ ಪುತ್ರ 2023ರಂದು ಸುಪ್ರೀಂ ಕೋರ್ಟ್ ಮೊರೆಹೋಗಿದ್ದು, ಈ ಕುರಿತು ಸೋಮವಾರ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್. ಭಟ್ಟಿ ಅವರಿದ್ದ ಪೀಠವು ವಿಚಾರಣೆ ನಡೆಸಿತು. 

ADVERTISEMENT

ಉಮರ್ ಅನ್ಸಾರಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ‘ನಾವು ಭಯಪಡುವಂತಹ ಘಟನೆಯೊಂದು ನಡೆದುಹೋಗಿದೆ. ಈ ಘಟನೆ ಕುರಿತು ತನಿಖೆ ನಡೆಸಬೇಕು. ದೇಶದಲ್ಲಿ ಮನುಷ್ಯರನ್ನು ಈ ರೀತಿಯಾಗಿ ನಡೆಸಿಕೊಳ್ಳಬಾರದು’ ಎಂದರು.

ಈ ಸಂಬಂಧ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಪೀಠವು ಸೂಚಿಸಿದೆ. 

ಐದು ಬಾರಿ ಶಾಸಕರಾಗಿದ್ದ ಮುಖ್ತಾರ್ ಅನ್ಸಾರಿ ಹೃದಯಸ್ತಂಭನದಿಂದಾಗಿ ಪೊಲೀಸ್ ವಶದಲ್ಲಿದ್ದಾಗಲೇ ಮಾರ್ಚ್ 28ರಂದು ಮೃತಪಟ್ಟಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.