ನವದೆಹಲಿ: ‘ಪಾಕ್ ಆಕ್ರಮಿತ ಕಾಶ್ಮೀರವು (ಪಿಒಕೆ) ಭಾರತದ ಅಂಗ. ಮುಂದಿನ ದಿನಗಳಲ್ಲಿ ಪಿಒಕೆ ಮೇಲೆ ನಿಯಂತ್ರಣ ಸಾಧಿಸಲಿದ್ದೇವೆ’ ಎಂದು ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಗ್ ಬುಧವಾರ ಹೇಳಿದ್ದಾರೆ.
‘ಪಿಒಕೆ ವಶಪಡಿಸಿಕೊಳ್ಳುವ ಅಗತ್ಯವೇನಿದೆ? ಅದು ನಮ್ಮದೇ. ಅದರ ಮೇಲೆ ನಾವು ಅಧಿಪತ್ಯ ಸಾಧಿಸಲಿದ್ದೇವೆ’ ಎಂದು ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಿಒಕೆಯಲ್ಲಿ ತ್ರಿವರ್ಣಧ್ವಜ ಹಾರಿಸುವ ಸಮಯ ದೂರವೇನಿಲ್ಲ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ ವಿ.ಕೆ. ಸಿಂಗ್ ಈ ಮಾತು ಹೇಳಿದ್ದಾರೆ. ಸೇನಾಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ‘ಪಿಒಕೆಯು ನೆರೆದೇಶದ ಭಯೋತ್ಪಾದಕರ ನಿಯಂತ್ರಣದಲ್ಲಿರುವ ಪ್ರದೇಶ’ ಎಂದು ಇತ್ತೀಚೆಗೆ ಹೇಳಿದ್ದರು.
ಕಾಶ್ಮೀರಕ್ಕೆ ಐರೋಪ್ಯ ಒಕ್ಕೂಟದ ಭೇಟಿಯನ್ನು ಟೀಕಿಸಿರುವ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿರುವ ವಿ.ಕೆ. ಸಿಂಗ್, ‘ವಿರೋಧಿಸುವುದನ್ನು ಬಿಟ್ಟು, ಪ್ರತಿಪಕ್ಷಗಳು ಬೇರೇನೂ ಮಾಡುತ್ತಿಲ್ಲ. ಅವರು ಏನಾದರೂ ಮಾತನಾಡಲಿ’ ಎಂದಿದ್ದಾರೆ.
ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್, ದೇಶದ ಸಂಸದರಿಗೆ ಕಾಶ್ಮೀರ ಭೇಟಿಯನ್ನು ನಿರಾಕರಿಸಿ, ಐರೋಪ್ಯ ಒಕ್ಕೂಟದ ಸಂಸದರಿಗೆ ಅನುವು ಮಾಡಿಕೊಡುವ ಸರ್ಕಾರದ ನಿಲುವನ್ನು ಖಂಡಿಸಿತ್ತು. ಇದು ರಾಷ್ಟ್ರೀಯ ಮುಜುಗರ ಎಂದೂ ಕರೆದಿತ್ತು. ಭಾರತೀಯ ಸಂಸದರ ಬದಲಾಗಿ ಐರೋಪ್ಯ ಒಕ್ಕೂಟದ ಸಂಸದರಿಗೆ ಅವಕಾಶ ಮಾಡಿಕೊಟ್ಟ ಬಿಜೆಪಿಯ ರಾಷ್ಟ್ರೀಯವಾದ ಪ್ರಬಲವಾದುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಲೇವಡಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.