ಅಮರಾವತಿ: ಆಂಧ್ರಪ್ರದೇಶದ ಜೀವನಾಡಿ ಮತ್ತು ರೈತರ ಬೆನ್ನೆಲುಬು ಎಂದೇ ಕರೆಯಲಾಗುವ ‘ಪೋಲಾವರಂ ನೀರಾವರಿ ಯೋಜನೆ’ಯನ್ನು 2027ರ ವೇಳೆಗೆ ಶತಾಯಗತಾಯ ಪೂರ್ಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಮಾತನಾಡಿರುವ ಅವರು, ‘ರಾಜ್ಯದಲ್ಲಿ ಪೋಲಾವರಂ ನೀರಾವರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತೇವೆ. ಜತೆಗೆ, ಸಾಧ್ಯವಾದರೆ ಇತರೆ ನದಿಗಳನ್ನು ಜೋಡಣೆ ಮಾಡುವ ಮೂಲಕ ರೈತರ ನೀರಿನ ಬವಣೆ ನೀಗಿಸಲು ನಮ್ಮ ಸರ್ಕಾರ ಭದ್ಧವಾಗಿದೆ’ ಎಂದು ಭರವಸೆ ನೀಡಿದ್ದಾರೆ.
‘ಆರ್ಥಿಕ ಸಮಸ್ಯೆಗಳ ಹೊರತಾಗಿಯೂ ಪೋಲಾವರಂ ಯೋಜನೆಯನ್ನು ಪೂರ್ಣಗೊಳಿಸಲು ನಾವು ಬದ್ಧರಾಗಿದ್ದೇವೆ. ₹55,000 ಕೋಟಿ ಮೌಲ್ಯದ ಯೋಜನೆಗೆ ಕೇಂದ್ರ ಸರ್ಕಾರ ಈವರೆಗೆ ₹12,157 ಕೋಟಿಯಷ್ಟು ಹಣವನ್ನು ಮಂಜೂರು ಮಾಡಿದ್ದು, ಈಗಾಗಲೇ ₹2,900 ಕೋಟಿ ಹಣ ಬಿಡುಗಡೆ ಮಾಡಿದೆ. ಮುಂದಿನ ಎರಡು ವರ್ಷಗಳಲ್ಲಿ ಬಾಕಿ ಅನುದಾನವನ್ನು ಬಿಡುಗಡೆ ಮಾಡಲಿದೆ’ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಪೋಲಾವರಂ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿತ್ತು.
ಪೋಲಾವರಂ, 4.3 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ, 960 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಹಾಗೂ 611 ಹಳ್ಳಿಗಳ ಸುಮಾರು 30 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸುವ ಬಹು ಉದ್ದೇಶಿತ ಯೋಜನೆಯಾಗಿದೆ. ಇದರಲ್ಲಿ 80 ಟಿಎಂಸಿ ನೀರನ್ನು ಕೃಷ್ಣಾ ನದಿಯ ಜಲಾನಯನ ಪ್ರದೇಶಕ್ಕೆ ಹರಿಸಲೂ ಉದ್ದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.