ADVERTISEMENT

ರೈತ ಹೋರಾಟ ಬೆಂಬಲಿಸುವುದು ದೇಶದ್ರೋಹವಾದರೆ, ಜೈಲಿನಲ್ಲಿರುವುದೇ ಲೇಸು: ದಿಶಾ ರವಿ

ಏಜೆನ್ಸೀಸ್
Published 20 ಫೆಬ್ರುವರಿ 2021, 15:15 IST
Last Updated 20 ಫೆಬ್ರುವರಿ 2021, 15:15 IST
ದಿಶಾ ರವಿ
ದಿಶಾ ರವಿ   

ನವದೆಹಲಿ: ಪರಿಸರ ಕಾರ್ಯಕರ್ತೆ ದಿಶಾ ರವಿ ಪ್ರಕರಣದ ಸಂಬಂಧ ದೆಹಲಿ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ಶನಿವಾರ ನಡೆದಿವೆ.

'ಜನವರಿ 26ರಂದು ನಡೆದ ಹಿಂಸಾಚಾರಕ್ಕೆ ರೈತರ ಪ್ರತಿಭಟನೆಯ ಟೂಲ್‌ಕಿಟ್ ಕಾರಣ ಎಂಬುದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ' ಎಂದು ದಿಶಾ ರವಿ ಪರ ವಕೀಲರು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

'ರೈತರ ಪ್ರತಿಭಟನೆಯನ್ನು ಎತ್ತಿ ತೋರಿಸುವುದು ದೇಶದ್ರೋಹವಾಗಿದ್ದರೆ, ನಾನು ಜೈಲಿನಲ್ಲಿರುವುದೇ ಉತ್ತಮ' ಎಂದು ದಿಶಾ ರವಿ ಅವರು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ADVERTISEMENT

ಇದೇ ವೇಳೆ ದಿಶಾ ರವಿ ಜಾಮೀನಿಗೆ ದೆಹಲಿ ಪೊಲೀಸರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

'ದಿಶಾ ರವಿ ಅವರು ಖಲಿಸ್ತಾನ ಪ್ರತಿಪಾದಕರೊಂದಿಗೆ ಸೇರಿ ಟೂಲ್‌ಕಿಟ್‌ ಅನ್ನು ಸಿದ್ಧಪಡಿಸಿದ್ದಾರೆ. ರೈತರ ಪ್ರತಿಭಟನೆಯ ಸೋಗಿನಲ್ಲಿ ಭಾರತದ ಶಾಂತಿಗೆ ಭಂಗ ತರಲು ಯತ್ನಿಸಿದ್ದಾರೆ. ಇದು ಜಾಗತಿಕ ಪಿತೂರಿಯ ಭಾಗವಾಗಿದೆ' ಎಂದು ದೆಹಲಿ ಪೊಲೀಸರು ತಮ್ಮ ವಾದ ಮಂಡಿಸಿದ್ದಾರೆ.

'ಇದು ಕೇವಲ ಟೂಲ್‌ಕಿಟ್‌ ಆಗಿರಲಿಲ್ಲ. ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಯೋಜನೆಯಾಗಿತ್ತು' ಎಂದು ದೆಹಲಿ ಪೊಲೀಸರು ನ್ಯಾಯಾಲಯದಲ್ಲಿ ಆರೋಪಿಸಿದ್ದಾರೆ.

'ವಾಟ್ಸ್‌ಆ್ಯಪ್‌ ಚಾಟ್‌ಗಳು, ಇಮೇಲ್‌ಗಳು ಮತ್ತು ಇತರ ಪುರಾವೆಗಳನ್ನು ದಿಶಾ ರವಿ ಅಳಿಸಿ ಹಾಕಿದ್ದಾರೆ. ಮುಂದೆ ಎದುರಿಸಬಹುದಾದ ಕಾನೂನು ಕ್ರಮಗಳ ಬಗ್ಗೆ ಅವರಿಗೆ ಸ್ಪಷ್ಟ ಅರಿವಿತ್ತು' ಎಂದು ಪೊಲೀಸರ ಪರ ವಕೀಲರು ವಾದಿಸಿದ್ದಾರೆ.

'ಭಾರತದ ಹೆಸರಿಗೆ ಮಸಿ ಬಳಿಯುವ ನಿಟ್ಟಿನಲ್ಲಿ ಹೆಣೆಯಲಾದ ಜಾಗತಿಕ ಪಿತೂರಿಯ ಭಾಗವಾಗಿ ದಿಶಾ ರವಿ ಕಾರ್ಯನಿರ್ವಹಿಸಿದ್ದಾರೆ' ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.

ದೆಹಲಿ ಪೊಲೀಸರ ಆರೋಪಗಳನ್ನು ದಿಶಾ ಪರ ವಕೀಲರು ಅಲ್ಲಗಳೆದಿದ್ದಾರೆ.

'ನಿಷೇಧಿತ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್‌ನೊಂದಿಗೆ ನಾನು(ದಿಶಾ ರವಿ) ಸಂಪರ್ಕ ಹೊಂದಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ನಾನು ಪ್ರತ್ಯೇಕತಾವಾದಿಗಳನ್ನು ಭೇಟಿಯಾಗಿದ್ದೇನೆ ಎಂಬುದಕ್ಕೆ ಯಾವುದೇ ಕುರುಹುಗಳಿಲ್ಲ' ಎಂಬ ದಿಶಾ ರವಿ ಹೇಳಿಕೆಯನ್ನು ವಕೀಲರು ನ್ಯಾಯಾಲಯದಲ್ಲಿ ಓದಿದ್ದಾರೆ.

'ರೈತರ ರ‍್ಯಾಲಿಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದರು. ಅದರಲ್ಲಿ ಭಾಗವಹಿಸುವಂತೆ ಜನರನ್ನು ಕೇಳಿಕೊಂಡಿದ್ದೇನೆ. ಇದರಿಂದ ನಾನು ಹೇಗೆ ದೇಶದ್ರೋಹಿ ಆಗುತ್ತೇನೆ?' ಎಂದು ದಿಶಾ ಪ್ರಶ್ನಿಸಿದ್ದಾರೆ.

ದಿಶಾ ರವಿ ಅವರ ಜಾಮೀನು ಅರ್ಜಿಯ ಬಗೆಗಿನ ಆದೇಶವನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಫೆ.23ಕ್ಕೆ ಕಾಯ್ದಿರಿಸಿದೆ.

ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುವ ‘ಟೂಲ್‌ಕಿಟ್‌’ ಹಂಚಿಕೊಂಡ ಆರೋಪದ ಮೇಲೆ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಬಂಧನವಾಗಿದೆ.

ಇದಕ್ಕೂ ಮೊದಲು ತನಿಖೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಪೊಲೀಸರು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ತಡೆಯಲು ದಿಶಾ ರವಿ ಅವರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು.

ತನ್ನ ಮತ್ತು ಮೂರನೇ ವ್ಯಕ್ತಿಗಳ ನಡುವೆ ನಡೆದಿರುವ ವಾಟ್ಸ್‌ಆ್ಯಪ್‌ ಸಂದೇಶ ಸೇರಿದಂತೆ ಯಾವುದೇ ಖಾಸಗಿ ಚಾಟ್‌ಗಳ ವಿಷಯಗಳನ್ನು ಪ್ರಕಟಿಸದಂತೆ ಮಾಧ್ಯಮಗಳ ಮೇಲೆ ತಡೆ ಹೇರುವಂತೆಯೂ ಅರ್ಜಿಯಲ್ಲಿ ಕೋರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.