ADVERTISEMENT

ಶಬರಿಮಲೆಗೆ ಮಹಿಳೆಯರ ಪ್ರವೇಶ: ಕೇರಳದಲ್ಲಿ ಬಿಜೆಪಿಯಿಂದ ಪ್ರತಿಭಟನೆ, ನಾಳೆ ಹರತಾಳ

ಶಬರಿಮಲೆ ದೇಗುಲ ಪ್ರವೇಶಿಸಿದ ಮಹಿಳೆಯರ ನಿವಾಸಗಳಿಗೆ ಭದ್ರತೆ * ದೇಗುಲದಲ್ಲಿ ಶುದ್ಧೀಕರಣ ಪ್ರಕ್ರಿಯೆ ಪೂರ್ಣ

ಏಜೆನ್ಸೀಸ್
Published 2 ಜನವರಿ 2019, 9:23 IST
Last Updated 2 ಜನವರಿ 2019, 9:23 IST
ತಿರುವನಂತಪುರದಲ್ಲಿ ಸಚಿವಾಲಯಕ್ಕೆ ನುಗ್ಗಲು ಯತ್ನಿಸಿದ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆಯರನ್ನು ಪೊಲೀಸರು ತಡೆದಿದ್ದಾರೆ.– ಎಎನ್‌ಐ ಚಿತ್ರ
ತಿರುವನಂತಪುರದಲ್ಲಿ ಸಚಿವಾಲಯಕ್ಕೆ ನುಗ್ಗಲು ಯತ್ನಿಸಿದ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆಯರನ್ನು ಪೊಲೀಸರು ತಡೆದಿದ್ದಾರೆ.– ಎಎನ್‌ಐ ಚಿತ್ರ   

ತಿರುವನಂತಪುರ:ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿರುವುದನ್ನು ವಿರೋಧಿಸಿರುವ ಬಿಜೆಪಿಯು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದು, ಗುರುವಾರ ರಾಜ್ಯದಾದ್ಯಂತ ಹರತಾಳಕ್ಕೆ ಕರೆಕೊಟ್ಟಿದೆ.

ಕೊಚ್ಚಿ, ತಿರುವನಂತಪುರಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಪಕ್ಷದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿರುವನಂತಪುರದಲ್ಲಿ ಸಚಿವಾಲಯಕ್ಕೆ ನುಗ್ಗಲು ಯತ್ನಿಸಿದ ಬಿಜೆಪಿ ಮಹಿಳಾ ಮೋರ್ಚಾದ ಐವರು ಸದಸ್ಯೆಯರನ್ನು ಪೊಲೀಸರು ತಡೆದಿದ್ದಾರೆ.

ADVERTISEMENT
ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿರುವುದನ್ನು ವಿರೋಧಿಸಿ ಕೊಚ್ಚಿಯಲ್ಲಿ ಪ್ರತಿಭಟನೆ ನಡೆಯಿತು

ಈ ಮಧ್ಯೆ, ಶಬರಿಮಲೆ ದೇಗುಲ ಪ್ರವೇಶಿಸಿ ದರ್ಶನ ಪಡೆದ ಬಿಂದು ಮತ್ತು ಕನಕದುರ್ಗಾ ಅವರ ನಿವಾಸಗಳಿಗೆ ದಾಳಿ ಭೀತಿ ಎದುರಾಗಿರುವುದರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇಬ್ಬರನ್ನೂ ಸುರಕ್ಷತೆಯ ದೃಷ್ಟಿಯಿಂದ ಅಜ್ಞಾತ ಸ್ಥಳದಲ್ಲಿರಿಸಲಾಗಿದೆ.

ಕೋಯಿಕ್ಕೋಡ್‌ನ ಕೊಯಿಲಾಂಡಿ ನಿವಾಸಿ ಬಿಂದು ಮತ್ತು ಮಲಪ್ಪುರಂನ ಅಂಗಡಿಪ್ಪುರಂ ನಿವಾಸಿ ಕನಕದುರ್ಗಾ ಬುಧವಾರ ಮುಂಜಾನೆ ಶಬರಿಮಲೆ ದೇಗುಲ ಪ್ರವೇಶಿಸಿ ದರ್ಶನ ಪಡೆದಿದ್ದರು. ಅವರು ದರ್ಶನ ಪಡೆಯುತ್ತಿರುವ ವಿಡಿಯೊ ಇದೀಗ ವೈರಲ್ ಆಗಿದೆ.

ಸಚಿವರಿಗೆ ಕಪ್ಪುಬಾವುಟ ಪ್ರದರ್ಶನ

ಈ ಮಧ್ಯೆ, ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರಿಗೆ ಗುರುವಾಯೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರಿಗೂ ಕಣ್ಣೂರಿನಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಪ್ರತಿಭಟನೆಯ ಬಿಸಿ ತಟ್ಟಿದೆ. ಕಾಸರಗೋಡಿನಲ್ಲಿ ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಧುನಿಕ ಔರಂಗಜೇಬ್ ಎಂದು ಬಿಜೆಪಿಯ ಕೇರಳ ಘಟಕದ ಅಧ್ಯಕ್ಷ ಶ್ರೀಧರನ್ ಪಿಳ್ಳೈ ಟೀಕಿಸಿದ್ದಾರೆ.

ಶುದ್ಧೀಕರಣದ ಬಳಿಕ ಬಾಗಿಲು ತೆರೆದ ದೇಗುಲ

ಋತುಮತಿಯಾಗುವ ವಯಸ್ಸಿನ ಮಹಿಳೆಯರು ದೇಗುಲ ಪ್ರವೇಶಿಸಿರುವುದರಿಂದ ಶುದ್ಧೀಕರಣಕ್ಕಾಗಿ ಬೆಳಿಗ್ಗೆ ಶಬರಿಮಲೆ ದೇಗುಲದ ಬಾಗಿಲು ಮುಚ್ಚಲಾಗಿತ್ತು. ಇದೀಗ ದೇಗುಲದ ಬಾಗಿಲು ತೆರೆಯಲಾಗಿದ್ದು, ದರ್ಶನಕ್ಕೆ ಅನುಮತಿ ನೀಡಲಾಗಿದೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.