ಕೋಲ್ಕತ್ತ: ಗ್ರಾಮಸ್ಥರಿಂದ ಭೂಕಬಳಿಕೆ ಆರೋಪದ ಮೇಲೆ ಪಶ್ಚಿಮ ಬಂಗಾಳ ಪೊಲೀಸರು ಸೋಮವಾರ ಟಿಎಂಸಿ ನಾಯಕ ಅಜಿತ್ ಮೈತಿ ಎಂಬವರನ್ನು ಸಂದೇಶ್‌ಖಾಲಿಯಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವ ಟಿಎಂಸಿ ನಾಯಕ ಶಹಜಹಾನ್ ಶೇಖ್ ಅವರ ಆಪ್ತ ಸಹಾಯಕ ಎಂದು ಪರಿಗಣಿಸಲ್ಪಟ್ಟಿರುವ ಮೈತಿ ಅವರನ್ನು ಭಾನುವಾರ ಸಂಜೆ ನಾಗರಿಕ ಸ್ವಯಂಸೇವಕರ ನಿವಾಸದಲ್ಲಿ ಬಂಧಿಸಲಾಗಿದೆ. ಗ್ರಾಮಸ್ಥರು ಬೆನ್ನಟ್ಟಿದ್ದರಿಂದ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಆತ ಮನೆಯಲ್ಲಿ ಬೀಗ ಹಾಕಿಕೊಂಡಿದ್ದ ಎಂದು ಅವರು ಹೇಳಿದ್ದಾರೆ.
‘ಭೂ ಕಬಳಿಕೆಗೆ ಸಂಬಂಧಿಸಿದಂತೆ ಗ್ರಾಮಸ್ಥರಿಂದ ದೂರುಗಳನ್ನು ಪಡೆದ ನಂತರ ನಾವು ಅವರನ್ನು ಬೆರ್ಮಡ್ಜೂರ್ ಪ್ರದೇಶದಲ್ಲಿ ಬಂಧಿಸಿದ್ದೇವೆ. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇವೆ’ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
70ಕ್ಕೂ ಹೆಚ್ಚು ದೂರುಗಳು ಬಂದಿದ್ದು, ಶಹಜಹಾನ್ ಶೇಖ್ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶಹಜಹಾನ್ ತಮ್ಮ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡಿದ್ದಾನೆ ಮತ್ತು ಸ್ಥಳೀಯ ಮಹಿಳೆಯರನ್ನು ಹಿಂಸಿಸಿದ್ದಾನೆ ಎಂದು ದೂರುಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.