ಪಟ್ನಾ: ಬಿಹಾರದ ಮಾಜಿ ಸಚಿವ ಮುಕೇಶ್ ಸಹಾನಿ ಅವರ ತಂದೆಯನ್ನು ಕೊಲೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ಹಾಗೂ ಆತ ತಪ್ಪು ಒಪ್ಪಿಕೊಂಡಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
'ಇಂಡಿಯಾ' ಮೈತ್ರಿಕೂಟದಲ್ಲಿರುವ ವಿಕಾಸ್‌ಶೀಲ್ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥರೂ ಆಗಿರುವ ಮುಕೇಶ್ ಅವರ ತಂದೆ ಜೀತನ್ ಸಹಾನಿ (70) ಅವರನ್ನು ಸೋಮವಾರ ತಡರಾತ್ರಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಪ್ರಮುಖ ಆರೋಪಿಯೂ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
ಈ ಸಂಬಂಧ ಬುಧವಾರ ಹೇಳಿಕೆ ಬಿಡುಗಡೆ ಮಾಡಿರುವ ಪೊಲೀಸರು, 'ಸಹಾನಿ ಅವರ ಪೂರ್ವಜರ ಮನೆ ಇರುವ ಸುಪೌಲ್ ಬಜಾರ್‌ನ ನಿವಾಸಿ ಕ್ವಾಸಿಮ್ ಅನ್ಸಾರಿ (40) ಎಂಬಾತನನ್ನು ಮುಖ್ಯ ಆರೋಪಿ ಎಂದು ಗುರುತಿಸಲಾಗಿದೆ. ಆತ, ಅಪರಾಧದಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ' ಎಂದು ತಿಳಿಸಿದ್ದಾರೆ.
'ಆರೋಪಿಯು, ಮುಕೇಶ್ ಅವರ ತಂದೆಯಿಂದ ₹ 1.5 ಲಕ್ಷ ಪಡೆದು ಅದಕ್ಕೆ ಪ್ರತಿಯಾಗಿ ತನ್ನ ಭೂಮಿಯನ್ನು ನೀಡಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ. ಹಣ ವಾಪಸ್ ನೀಡಲು ಶಕ್ತನಾಗಿಲ್ಲದ ಕಾರಣ, ಭೂಮಿಯನ್ನು ಹಿಂಪಡೆಯಲು ಆತನಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ತನ್ನ ಸಹಚರರೊಂದಿಗೆ ಸೋಮವಾರ ಮಧ್ಯರಾತ್ರಿ ಜೀತನ್ ಅವರ ಮನೆಗೆ ಹೋಗಿ ಜಮೀನಿನ ಪತ್ರಗಳನ್ನು ಮರಳಿಸುವಂತೆ ಕೇಳಿದ್ದ. ಅದಕ್ಕೆ ನಿರಾಕರಿಸಿದಾಗ ಚಾಕುವಿನಿಂದ ಇರಿದಿದ್ದಾನೆ. ಆರೋಪಿಗೆ ಈ ಕೃತ್ಯವೆಸಗಲು ಸಹಚರರು ನೆರವಾಗಿದ್ದಾರೆ' ಎಂದು ವಿವರಿಸಲಾಗಿದೆ.
ಅನ್ಸಾರಿ ಹಾಗೂ ಆತನ ಸಹಚರರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ.
ದರ್ಭಾಂಗ ಜಿಲ್ಲೆಯಲ್ಲಿರುವ ಮನೆಯಲ್ಲಿ ಜೀತನ್ ಅವರ ಮೃತದೇಹವು ಬರ್ಬರವಾಗಿ ಇರಿದ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿತ್ತು. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.
ಈ ಪ್ರಕರಣವು ರಾಜ್ಯದಾದ್ಯಂತ ಆತಂಕ ಸೃಷ್ಟಿಸಿದೆ. ಮುಖ್ಯಮಂತ್ರಿ ನಿತಿಶ್ ಕುಮಾರ್ ನೇತೃತ್ವ ಸರ್ಕಾರದಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ವಿರೋಧ ಪಕ್ಷಗಳು ಕಿಡಿಕಾರಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.