ADVERTISEMENT

ಇಬ್ಬರು ಮಕ್ಕಳ ಹತ್ಯೆ ಪ್ರಕರಣ: 2ನೇ ಆರೋಪಿ ಶರಣಾಗತಿ

ಪಿಟಿಐ
Published 21 ಮಾರ್ಚ್ 2024, 15:20 IST
Last Updated 21 ಮಾರ್ಚ್ 2024, 15:20 IST
ಜಾವೇದ್‌
ಜಾವೇದ್‌   

ಬದೌನ್‌ (ಉತ್ತರಪ್ರದೇಶ): ನೆರೆಮನೆಯ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಸಾಜಿದ್‌ನ ಸಹೋದರ ಜಾವಿದ್‌ ಬರೇಲಿಯ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 

ಮಂಗಳವಾರ ಹತ್ಯೆ ನಡೆದ ನಂತರ ಜಾವೇದ್ ತಲೆಮರೆಸಿಕೊಂಡಿದ್ದ. ಆತನನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಕರೆತರಲಾಗುತ್ತಿದೆ ಎಂದು ಬದೌನ್‌ ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಪ್ರಿಯದರ್ಶಿ ತಿಳಿಸಿದ್ದಾರೆ.

ಜಾವೇದ್ ಬಂಧನಕ್ಕೆ ಪೊಲೀಸರು ಬುಧವಾರ ಸಂಜೆ ₹25 ಸಾವಿರ ಬಹುಮಾನ ಘೋಷಿಸಿದ್ದರು. ಇದಾದ ನಂತರ, ಆರೋಪಿ ತನ್ನನ್ನು ಪೊಲೀಸರ ಬಳಿ ಕರೆದೊಯ್ಯುವಂತೆ ಜನರ ಗುಂಪಿಗೆ ಮನವಿ ಮಾಡಿದ್ದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. 

ADVERTISEMENT

‘ನನ್ನ ಅಣ್ಣ ಕೃತ್ಯ ಎಸಗಿದ್ದಾನೆ. ಆದರೆ, ಘಟನೆಗೂ ನನಗೂ ಸಂಬಂಧವಿಲ್ಲ. ಘಟನೆಯ ನಂತರ ಹೆದರಿ ದೆಹಲಿಗೆ ಓಡಿಹೋಗಿದ್ದೆ. ಪೊಲೀಸರಿಗೆ ಶರಣಾಗಲು ಬರೇಲಿಗೆ ಹಿಂತಿರುಗಿದ್ದೇನೆ’ ಎಂದು ಜಾವೇದ್ ವಿಡಿಯೊದಲ್ಲಿ ಹೇಳಿಕೊಂಡಿದ್ದಾನೆ. ಪೊಲೀಸ್ ಠಾಣೆ ಸಮೀಪದ ಆಟೊ ನಿಲ್ದಾಣದಲ್ಲಿ ಈ ವಿಡಿಯೊ ಚಿತ್ರೀಕರಿಸಲಾಗಿದೆ.

ಇತ್ತೀಚೆಗೆ ಸಲೂನ್‌ ಅಂಗಡಿ ತೆರೆದಿದ್ದ ಸಾಜಿದ್ ಮಂಗಳವಾರ ತನ್ನ ಅಂಗಡಿ ಪಕ್ಕದ, ಪರಿಚಿತ ಕುಟುಂಬದ ಮನೆಗೆ ನುಗ್ಗಿ ಆಯುಷ್ (12), ಅಹಾನ್ ಅಲಿಯಾಸ್ ಹನಿ (8) ಮತ್ತು ಯುವರಾಜ್ (10) ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ. ಆಯುಷ್ ಮತ್ತು ಅಹಾನ್ ಸಾವಿಗೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯುವರಾಜ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಸಾಜಿದ್ ಮತ್ತು ಜಾವೇದ್ ಇಬ್ಬರ ವಿರುದ್ಧವೂ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಸಾಜಿದ್‌ ಸಮೀಪದ ಅರಣ್ಯದಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. 

ಮಕ್ಕಳ ತಂದೆ ವಿನೋದ್ ಕುಮಾರ್, ಜಾವೇದ್ ಬಂಧಿಸಿರುವ ಪೊಲೀಸರನ್ನು ಶ್ಲಾಘಿಸಿದ್ದು, ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ತಮ್ಮ ಕುಟುಂಬಕ್ಕೆ ಪೊಲೀಸ್ ಭದ್ರತೆ ನೀಡಬೇಕು ಎಂದು ಕೋರಿದ್ದಾರೆ.

‘ಈ ಕೃತ್ಯ ಒಬ್ಬನಿಂದ ನಡೆದಿಲ್ಲ. ಬಂಧಿತ ಕೂಡ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ. ಆರೋಪಿ ಯಾರದೇ ಕತ್ತನ್ನೂ ಕತ್ತರಿಸಬಹುದು. ಆತನನ್ನು ಎನ್‌ಕೌಂಟರ್ ಮಾಡಬೇಕು ಅಥವಾ ಮರಣದಂಡನೆ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಕುಮಾರ್‌ ಹೇಳಿದ್ದಾರೆ. 

ಮ್ಯಾಜಿಸ್ಟೀರಿಯಲ್‌ ತನಿಖೆ:

ಸಾಜಿದ್ ಪೊಲೀಸ್ ಎನ್‌ಕೌಂಟರ್ ಬಗ್ಗೆ ಮ್ಯಾಜಿಸ್ಟೀರಿಯಲ್‌ ತನಿಖೆಗೆ ಜಿಲ್ಲಾಡಳಿತ ಆದೇಶಿಸಿದೆ.

ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಬದೌನ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮನೋಜ್ ಕುಮಾರ್ ಸೂಚಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.