ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಭಾನುವಾರ ರಾತ್ರಿ ಪೊಲೀಸರು ಥಳಿಸಿರುವುದನ್ನು ಖಂಡಿಸಿ, ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಮಧ್ಯರಾತ್ರಿ ದಿಢೀರ್ ಪ್ರತಿಭಟನೆಗಳು ನಡೆದವು.
ಪ್ರತಿಭಟನಾ ಮೆರವಣಿಗೆಯನ್ನು ತಡೆದ ಪೊಲೀಸರೊಂದಿಗೆ ಆಲಿಗಡ ಮುಸ್ಲಿಂ ವಿ.ವಿ ವಿದ್ಯಾರ್ಥಿಗಳು ಘರ್ಷಣೆಗಿಳಿದರು. ಮಧ್ಯರಾತ್ರಿಯ ಹೊತ್ತಿಗೆ ಹೈದರಾಬಾದ್ ನ ಮೌಲಾನಾ ಆಜಾದ್ ಉರ್ದು ವಿವಿ ಮತ್ತು ಬನಾರಸ್ ಹಿಂದೂ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದರು.
ಜವಹರಲಾಲ್ ನೆಹರು ವಿ.ವಿ ವಿದ್ಯಾರ್ಥಿಗಳ ಕರೆ ಮೇರೆಗೆ ದೆಹಲಿಯ ಪೊಲೀಸ್ ಪ್ರಧಾನ ಕಚೇರಿ ಎದುರು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಭಾನುವಾರ ಸಂಜೆ ಜಾಮಿಯಾ ವಿ.ವಿ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ ಪೊಲೀಸರೊಂದಿಗೆ ಘರ್ಷಣೆಯಲ್ಲಿ ಪರ್ಯಾವಸನಗೊಂಡಿತು. ಈ ಸಂದರ್ಭ ಹಲವು ವಾಹನಗಳಿಗೆ ಬೆಂಕಿಹಚ್ಚಲಾಯಿತು.
ಲಾಠಿ ಚಾರ್ಜ್ ಮಾಡಿದ ನಂತರವೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದರು. ವಿ.ವಿ ಆವರಣಕ್ಕೆ ನುಗ್ಗಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಂಧಿಸಿದರು. ಎಲ್ಲ ಬಂಧಿತ ವಿದ್ಯಾರ್ಥಿಗಳನ್ನು ಮಧ್ಯರಾತ್ರಿ 3.30ರ ನಂತರ ಬಿಡುಗಡೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.