ನವದೆಹಲಿ: ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿ ವ್ಯಕ್ತಿಯಿಂದ ₹5 ಕೋಟಿ ಸುಲಿಗೆಗೆ ಯತ್ನಿಸಿದ್ದ ಏಳು ಜನರ ವಿರುದ್ಧ ದೆಹಲಿ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೆಹಲಿಯ ದಕ್ಷಿಣ ಭಾಗದಲ್ಲಿರುವ ಚತ್ತರಪುರ ಪ್ರದೇಶದ ಡಿಎಲ್‌ಎಫ್ ಫಾರ್ಮ್ಸ್‌ಗೆ ಅ. 22ರಂದು ಮಧ್ಯಾಹ್ನ 12ಕ್ಕೆ ಕೆಲ ವ್ಯಕ್ತಿಗಳು ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿದ್ದರು. ಈ ಕುರಿತು ಜಾರಿ ನಿರ್ದೇಶನಾಲಯವು ಹೇಳಿಕೆ ಬಿಡುಗಡೆ ಮಾಡಿತ್ತು.
‘ಆರೋಪಿಗಳು ನಕಲಿ ದಾಳಿ ನಡೆಸಿ ವ್ಯಕ್ತಿಯನ್ನು ಕೋಟಕ್ ಬ್ಯಾಂಕ್‌ಗೆ ಕರೆದೊಯ್ದು ₹5 ಕೋಟಿ ಮೊತ್ತವನ್ನು ಬ್ಯಾಂಕ್‌ನಿಂದ ಬಿಡಿಸಿಕೊಡುವಂತೆ ಹೇಳಿದ್ದರು. ದಾಳಿ ನಡೆಸಿದವರಲ್ಲಿ ಮೂವರು ವ್ಯವಹರಿಸುತ್ತಿದ್ದರು. ಉಳಿದವರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು’ ಎಂದು ದೂರು ನೀಡಿದ ವ್ಯಕ್ತಿ ಹೇಳಿದ್ದಾರೆ.
‘ಇದೇ ಬ್ಯಾಂಕ್ ಶಾಖೆಯಿಂದ ಯಾವಾಗಲೂ ಏಕೆ ಹಣ ಬಿಡಿಸುತ್ತೀರಿ?’ ಎಂದು ಕೇಳಿದ ನಕಲಿ ಅಧಿಕಾರಿಗಳು ಹಳೆಯ ಚೆಕ್‌ಗಳನ್ನು ತೋರಿಸಿ, ಬಂಧಿಸುವ ಬೆದರಿಕೆ ಒಡ್ಡಿದ್ದಾರೆ. ಕೇಳಿದಷ್ಟು ಹಣ ನೀಡದಿದ್ದರೆ ಬಂಧಿಸಿ ಕರೆದೊಯ್ಯುವ ಬೆದರಿಕೆ ಒಡ್ಡಿದ್ದರು. ಹಣವನ್ನು ಮರುದಿನವಷ್ಟೇ ಬ್ಯಾಂಕ್‌ನಿಂದ ಬಿಡಿಸಲು ಸಾಧ್ಯ ಎಂದಿದ್ದಕ್ಕೆ, ಆರೋಪಿಗಳು ದೂರದಾರರ ಮನೆಯಲ್ಲೇ ತಂಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಇಷ್ಟರೊಳಗೆ ದೂರುದಾರ ವ್ಯಕ್ತಿ ತನ್ನ ವಕೀಲರಿಗೆ ಸಂದೇಶ ಕಳುಹಿಸಿ, ಪರಿಸ್ಥಿತಿ ವಿವರಿಸುವಲ್ಲಿ ಯಶಸ್ವಿಯಾಗಿದ್ದರು. ಮರುದಿನ ಬ್ಯಾಂಕ್‌ಗೆ ಬಂದ ವಕೀಲರು, ನಕಲಿ ಅಧಿಕಾರಿಗಳಿಗೆ ತಮ್ಮ ಗುರುತಿನ ಚೀಟಿ ತೋರಿಸುವಂತೆ ಹೇಳಿದರು. ಈ ಹೊತ್ತಿಗೆ ಬ್ಯಾಂಕ್ ವ್ಯವಸ್ಥಾಪಕರಿಗೆ ಮಾಹಿತಿ ನೀಡಲಾಗಿತ್ತು. ಇದನ್ನು ಅರಿತ ನಕಲಿ ಅಧಿಕಾರಿಗಳು, ಬ್ಯಾಂಕ್‌ನ ಬಾಗಿಲು ಹಾಕುವಷ್ಟರಲ್ಲಿ ಪರಾರಿಯಾಗಿದ್ದರು’ ಎಂದು ವಿವರಿಸಿದ್ದಾರೆ.
‘ಮನೆಯಲ್ಲೇ ಉಳಿದಿದ್ದ ನಕಲಿ ಅಧಿಕಾರಿಗಳು ಬ್ಯಾಂಕ್‌ನಲ್ಲಿ ನಡೆದ ಘಟನೆಯ ಮಾಹಿತಿ ಪಡೆದು, ಅವರೂ ಕಾಲು ಕಿತ್ತಿದ್ದರು. ಆದರೆ, ಮನೆಯ ಗೇಟ್‌ಗೆ ಬೀಗ ಹಾಕಿದ್ದರಿಂದ ತಮ್ಮ ಕಾರನ್ನು ತೆಗೆದುಕೊಂಡು ಹೋಗಲು ಅವರಿಗೆ ಸಾಧ್ಯವಾಗಿರಲಿಲ್ಲ. ನಂತರ ಘಟನೆಯನ್ನು ED ಅಧಿಕಾರಿಗಳ ಗಮನಕ್ಕೆ ತರಲಾಯಿತು. ಪ್ರಕರಣ ದಾಖಲಿಸಿಕೊಂಡು, ಮನೆಯಲ್ಲಿ ನಿಂತಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.