ADVERTISEMENT

Bilkis Bano: ಅಪರಾಧಿಗಳು ತಲೆಮರೆಸಿಕೊಂಡಿಲ್ಲ, ಶರಣಾಗುವ ಮಾಹಿತಿಯೂ ಇಲ್ಲ –ಪೊಲೀಸ್

ಪಿಟಿಐ
Published 10 ಜನವರಿ 2024, 3:19 IST
Last Updated 10 ಜನವರಿ 2024, 3:19 IST
<div class="paragraphs"><p>ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಗುಜರಾತ್ ಸರ್ಕಾರದ ಆದೇಶದಂತೆ 2022ರ ಆಗಸ್ಟ್‌ 15ರಂದು ಗೋಧ್ರಾ ಜೈಲಿನಿಂದ ಬಿಡುಗಡೆಯಾದಾಗ..</p></div>

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಗುಜರಾತ್ ಸರ್ಕಾರದ ಆದೇಶದಂತೆ 2022ರ ಆಗಸ್ಟ್‌ 15ರಂದು ಗೋಧ್ರಾ ಜೈಲಿನಿಂದ ಬಿಡುಗಡೆಯಾದಾಗ..

   

ಪಿಟಿಐ ಚಿತ್ರ

ದಾಹೊದ್‌: ಬಿಲ್ಕಿಸ್ ಬಾನು ಅವರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಿಗೆ ಗುಜರಾತ್‌ ಸರ್ಕಾರ ನೀಡಿದ್ದ ಕ್ಷಮಾದಾನವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ಆದಾಗ್ಯೂ, ಅಪರಾಧಿಗಳು ಪೊಲೀಸರಿಗೆ ಶರಣಾಗುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಅಪರಾಧಿಗಳು ತಲೆಮರೆಸಿಕೊಂಡಿಲ್ಲ. ಅವರು ವಾಸವಿರುವ ಪ್ರದೇಶಗಳಲ್ಲಿ ಶಾಂತಿ ಕಾಪಾಡುವ ಸಲುವಾಗಿ ಪೊಲೀಸ್‌ ಪಡೆಯನ್ನು ನಿಯೋಜಿಸಲಾಗಿದೆ. ಅಪರಾಧಿಗಳಲ್ಲಿ ಕೆಲವರು ತಮ್ಮ ಸಂಬಂಧಿಕರನ್ನು ಭೇಟಿಯಾಗಿದ್ದಾರೆ ಎಂದು ದಾಹೊದ್‌ ಎಸ್‌ಪಿ ಬಲರಾಮ್ ಮೀನಾ ತಿಳಿಸಿದ್ದಾರೆ.

'ಅಪರಾಧಿಗಳ ಶರಣಾಗತಿಯ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ಸುಪ್ರೀಂ ಕೋರ್ಟ್‌ ಆದೇಶದ ಪ್ರತಿಯೂ ನಮಗೆ ಬಂದಿಲ್ಲ. ಅಪರಾಧಿಗಳು ಸಿಂಗ್ವಾಡ ತಾಲ್ಲೂಕಿನವರಾಗಿದ್ದು, ಆದೇಶ ಪ್ರಕಟವಾಗುವುದಕ್ಕೂ ಮೊದಲಿನಿಂದಲೇ ಅಂದರೆ ಸೋಮವಾರ ಬೆಳಿಗ್ಗೆಯೇ ಅಲ್ಲಿಗೆ ಪೊಲೀಸರನ್ನು ನಿಯೋಜಿಸಿದ್ದೇವೆ. ಕೋಮುಗಲಭೆ ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಅವರು ಹೇಳಿದ್ದಾರೆ.

'ಅಪರಾಧಿಗಳು ತಲೆಮರೆಸಿಕೊಂಡಿಲ್ಲ. ಕೆಲವರು ತಮ್ಮ ಸಂಬಂಧಿಕರನ್ನು ಭೇಟಿಯಾಗಿದ್ದಾರೆ. ಸಂಪೂರ್ಣ ರಣಧಿಕ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ' ಎಂದೂ ಮಾಹಿತಿ ನೀಡಿದ್ದಾರೆ.

2002ರಲ್ಲಿ ಗೋಧ್ರಾ ರೈಲು ದುರಂತದ ಬಳಿಕ ಗುಜರಾತ್‌ನಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ ಪಲಾಯನ ಮಾಡುತ್ತಿದ್ದ ಬಿಲ್ಕಿಸ್‌ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆಗ 21 ವರ್ಷದವರಾಗಿದ್ದ ಬಾನು, ಐದು ತಿಂಗಳ ಗರ್ಭಿಣಿಯೂ ಆಗಿದ್ದರು. ಅವರ ಮೂರು ವರ್ಷದ ಮಗಳೂ ಸೇರಿದಂತೆ, ಕುಟುಂಬದ 7 ಮಂದಿಯನ್ನು ಹತ್ಯೆ ಮಾಡಲಾಗಿತ್ತು.

ಗುಜರಾತ್ ಸರ್ಕಾರದ ಆದೇಶದ ಮೇರೆಗೆ ಎಲ್ಲ ಅಪರಾಧಿಗಳು 2022ರ ಆಗಸ್ಟ್‌ 15ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.

ಅಪರಾಧಿಗಳಿಗೆ ಕ್ಷಮಾದಾನ ನೀಡುವ ಪ್ರಕ್ರಿಯೆಯಲ್ಲಿ ಗುಜರಾತ್ ಸರ್ಕಾರವು ತನ್ನ ವಿವೇಚನಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಚಾಟಿ ಬೀಸಿರುವ ಸುಪ್ರೀಂ ಕೋರ್ಟ್, ಅಪರಾಧಿಗಳು ಮುಂದಿನ 2 ವಾರದೊಳಗೆ ಜೈಲಿಗೆ ಹಿಂದಿರುಗುವಂತೆ ಜನವರಿ 8ರಂದು ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.