ಹೈದರಾಬಾದ್: ಉಚಿತ ಹಲೀಮ್‌ಗಾಗಿ(ಮಾಂಸ, ಗೋಧಿ ಇತರ ಸಾಮಾಗ್ರಿಗಳಿಂದ ತಯಾರಿಸಿದ ಖಾದ್ಯ) ಹೋಟೆಲ್‌ವೊಂದರ ಎದುರುಗಡೆ ನೂರಾರು ಜನ ಜಮಾಯಿಸಿ ನೂಕುನುಗ್ಗಲು ಉಂಟಾಗಿದ್ದು, ಸಂಚಾರ ದಟ್ಟಣೆಗೆ ಕಾರಣವಾದ ಘಟನೆ ಹೈದಾರಾಬಾದ್‌ನ ಮಾಲಕ್‌ಪೇಟೆಯಲ್ಲಿ ನಡೆದಿದೆ.
ರಂಜಾನ್ ಪ್ರಯುಕ್ತ ಮಾಲಕ್‌ಪೇಟೆಯಲ್ಲಿರುವ ಹೋಟೆಲ್‌ವೊಂದು ಉಚಿತ ಹಲೀಮ್ ವಿತರಿಸುವುದಾಗಿ ಮಂಗಳವಾರ ತಿಳಿಸಿತ್ತು. ವಿಷಯ ತಿಳಿಯುತ್ತಿದ್ದಂತೆ ಹಲವಾರು ಜನರು ಹೋಟೆಲ್ ಬಳಿ ಬಂದಿದ್ದು, ನೂಕು ನುಗ್ಗಲು ಉಂಟಾಗಿತ್ತು. ಜನರ ದಟ್ಟಣೆಯಿಂದ ಹೋಟೆಲ್ ಸಿಬ್ಬಂದಿ ಹೈರಾಣಾಗಿದ್ದು, ಆಹಾರ ವಿತರಿಸುವುದನ್ನು ತಕ್ಷಣ ನಿಲ್ಲಿಸಿದರು. ಗುಂಪನ್ನು ಚದುರಿಸಲು ಕೊನೆಗೆ ಪೊಲೀಸರೇ ಮಧ್ಯ ಪ್ರವೇಶಿಸಬೇಕಾಯಿತು.
‘ಉಚಿತ ಆಹಾರ ವಿತರಣೆ ಮಾಡುವ ಬಗ್ಗೆ ಹೋಟೆಲ್ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಮೊದಲೇ ಮಾಹಿತಿ ಸಿಕ್ಕಿದ್ದರೆ ಹೋಟೆಲ್ ಎದುರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬಹುದಿತ್ತು. ಮಾಹಿತಿ ನೀಡದೆ ಸಂಚಾರ ದಟ್ಟಣೆಗೆ ಕಾರಣವಾಗಿದ್ದರಿಂದ ಹೋಟೆಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಮಾಲಕ್‌ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೋಟೆಲ್ ಹೊರಗೆ ನೆರೆದಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.