ತ್ರಿಶ್ಶೂರ್ (ಕೇರಳ): ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ನಡೆದ ತ್ರಿಶ್ಶೂರ್ ಪೂರಂ ಉತ್ಸವದಲ್ಲಿ ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಆಂಬುಲೆನ್ಸ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ಇಲ್ಲಿನ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.
ಈ ಸಂಬಂಧ ಸಿಪಿಐನ ಸ್ಥಳೀಯ ನಾಯಕರೊಬ್ಬರು ದೂರು ನೀಡಿದ್ದಾರೆ. ಅದನ್ನು ಆಧರಿಸಿ ಪೊಲೀಸರು ಕೇಂದ್ರ ಪ್ರವಾಸೋದ್ಯಮ ಮತ್ತು ಪೆಟ್ರೋಲಿಯಂ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ವಿರುದ್ಧ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಇದು ಲೋಕಸಭೆ ಚುನಾವಣೆಗೂ ಮುನ್ನ ನಡೆದ ಘಟನೆಯಾಗಿದ್ದು, ಎಫ್‌ಐಆರ್ ದಾಖಲಿಸಬಹುದೇ ಎಂಬುದರ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತ ಪ್ರಾಥಮಿಕ ವಿಚಾರಣೆಗಾಗಿ ದೂರನ್ನು ತ್ರಿಶ್ಶೂರ್‌ನ ಸಹಾಯಕ ಪೊಲೀಸ್ ಆಯುಕ್ತರಿಗೆ (ಎಸಿಪಿ) ರವಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪೂರಂ ಹಬ್ಬದ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಗೋಪಿ ಅವರು ತ್ರಿಶೂರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಪಡೆದರು.
ಪೂರಂ ಹಬ್ಬದಲ್ಲಿ ಗೋಪಿ ಅವರು ಸೇವಾ ಭಾರತಿ ಆಂಬುಲೆನ್ಸ್ ಮೂಲಕ ಪೂರಂ ಮೈದಾನಕ್ಕೆ ಬಂದಿದ್ದರು. ಈ ಮೂಲಕ ಅವರು ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಮೀಸಲಿರುವ ವಾಹನವನ್ನು ವೈದ್ಯಕೀಯೇತರ ಉದ್ದೇಶಗಳಿಗೆ ಬಳಸಿದ್ದಾರೆ ಎಂದು ಸಿಪಿಐ ನಾಯಕ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.