ಹೋಶಿಯಾರ್‌ಪುರ, ಪಂಜಾಬ್: ಸಿಖ್ ಮೂಲಭೂತವಾದಿ ಪ್ರಚಾರಕ ಅಮೃತಪಾಲ್ ಸಿಂಗ್ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದ್ದು, ಮೂರು ದಿನಗಳ ಹಿಂದೆ ಶಂಕಿತ ವ್ಯಕ್ತಿಗಳು ತಮ್ಮ ಕಾರುಗಳನ್ನು ಬಿಟ್ಟು ಪರಾರಿಯಾಗಿರುವ ಹಿನ್ನೆಲೆಯಲ್ಲಿ ಡೇರೆಗಳು ಮತ್ತು ಅಡಗುತಾಣಗಳಲ್ಲಿ ಪಂಜಾಬ್ ಪೊಲೀಸರು ಶೋಧ ನಡೆಸಿದರು.
ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್ ಇರಿಸಲಾಗಿದೆ. ಮರ್ನಾಯನ್ ಮತ್ತು ಸಮೀಪದ ಹಳ್ಳಿಗಳಲ್ಲಿ ಎಲ್ಲಾ ವಾಹನಗಳ ತಪಾಸಣೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಅಧಿಕಾರಿಗಳು ಡೇರೆಗಳು, ವಸತಿ ಸ್ಥಳಗಳು, ಕೊಳವೆ ಬಾವಿಗಳ ಬಳಿ ಸ್ಥಾಪಿಸಲಾದ ಸಣ್ಣ ಕೊಠಡಿಗಳು ಮತ್ತು ಹಲವಾರು ಹಳ್ಳಿಗಳಲ್ಲಿ ಪ್ರಾಣಿಗಳಿಗೆ ಆಶ್ರಯ ನೀಡಿರುವ ಸ್ಥಳಗಳನ್ನು ಸಹ ಶೋಧಿಸುತ್ತಿದ್ದಾರೆ.
ಅಮೃತಪಾಲ್ ಸಿಂಗ್ ಪತ್ತೆಗೆ ಪೊಲೀಸರು ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ. ಆತನ ನೇತೃತ್ವದ ವಾರಿಸ್ ಪಂಜಾಬ್ ದೇ ಸಂಘಟನೆಯ ಮೇಲೆ ಮಾರ್ಚ್ 18ರಂದು ನಡೆದ ದಾಳಿ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ.
ಈ ನಡುವೆ ಕಳೆದ ಮೂರು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಎರಡು ವಿಡಿಯೊ ಸಿಂಗ್ ಕಾಣಿಸಿಕೊಂಡಿದ್ದ.
ಇತ್ತೀಚಿನ ವಿಡಿಯೊದಲ್ಲಿ, ‘ತಾನು ದೇಶಭ್ರಷ್ಟನಲ್ಲ ಮತ್ತು ಶೀಘ್ರದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತೇನೆ ’ ಎಂದು ಸಿಂಗ್ ಪ್ರತಿಪಾದಿಸಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.