ಹೈದರಾಬಾದ್: ತೆಲಂಗಾಣದಲ್ಲಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಮತದಾರರಿಗೆ ಆಮಿಷ ಒಡ್ಡುವ ಸಲುವಾಗಿ ಸಂಗ್ರಹಿಸಿದ್ದ ನಗದು ಸೇರಿದಂತೆ ಒಟ್ಟು ₹ 243 ಕೋಟಿ ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪೈಕಿ ಚಿನ್ನ, ಬೆಳ್ಳಿ, ವಜ್ರ, ಪ್ಲಾಟಿನಂ ವಸ್ತುಗಳ ಮೌಲ್ಯ ₹ 120 ಕೋಟಿ ಆಗಿದೆ. ಉಳಿದಂತೆ ನಗದು, ಮದ್ಯ, ಗಾಂಜಾ ವಶಕ್ಕೆ ಪಡೆಯಲಾಘಿದೆ. 181.986 ಕೆ.ಜಿ ಚಿನ್ನ, 693.371 ಕೆ.ಜಿ. ಬೆಳ್ಳಿ, 154.4546 ಕ್ಯಾರಟ್ ವಜ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹೊಲಿಗೆ ಯಂತ್ರಗಳು, ಕುಕ್ಕರ್ ಗಳು, ಸೀರೆಗಳು, ಗಡಿಯಾರಗಳು, ಹೆಲ್ಮೆಟ್‌ಗಳು, ಮೊಬೈಲ್‌ಗಳು, ಲಂಚ್ ಬಾಕ್ಸ್‌ಗಳು ಮತ್ತು ಇತರ ಅಡುಗೆ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಅಕ್ಟೋಬರ್ 9ರಿಂದ ನೀತಿ ಸಂಹಿತೆ ಜಾರಿಯಲ್ಲಿದೆ.
2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ₹ 103 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು.
ಚುನಾವಣೆ ಸುಗಮಗಾಗಿ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆಯನ್ನು ಪಾಲಿಸಬೇಕು ಹಾಗೂ ಮತದಾರರಿಗೆ ಹಣ, ಉಡುಗೊರೆಯ ಆಮಿಷ ನೀಡಬಾರದು ಎಂದು ತೆಲಂಗಾಣ ಡಿಜಿಪಿ ಅಂಜನಿ ಕುಮಾರ್ ಹೇಳಿದ್ದಾರೆ.
ಹಣ, ಮದ್ಯ ಹಾಗೂ ಮಾದಕ ವಸ್ತುಗಳ ಸಾಗಣೆ ತಡೆಗಟ್ಟಲು ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ 95 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. 373 ತಪಾಸಣಾ ತಂಡ (ಫ್ಲೈಯಿಂಗ್ ಸ್ಕ್ವಾಡ್), ಸ್ಟಾಟಿಕ್ ಸರ್ವೆಲೆನ್ಸ್ ಟೀಮ್ ಹಾಗೂ ದಿನದ 24 ತಾಸು ಮೇಲ್ವಿಚಾರಣೆಗಾಗಿ ವಿಶೇಷ ಮೊಬೈಲ್ ತಂಡಗಳನ್ನು ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.