ADVERTISEMENT

ಎ. ಆರ್‌. ರೆಹಮಾನ್ ಸಂಗೀತ ಕಾರ್ಯಕ್ರಮ ನಿಲ್ಲಿಸಿದ ಪೊಲೀಸರು!

ಪಿಟಿಐ
Published 1 ಮೇ 2023, 10:58 IST
Last Updated 1 ಮೇ 2023, 10:58 IST
ಎ.ಆರ್‌. ರೆಹಮಾನ್
ಎ.ಆರ್‌. ರೆಹಮಾನ್   

ಪುಣೆ : ಆಸ್ಕರ್ ಪ್ರಶಸ್ತಿ ವಿಜೇತ ಜನಪ್ರಿಯ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್ ಅವರ ಸಂಗೀತ ಕಾರ್ಯಕ್ರಮವನ್ನು ಪೊಲೀಸರು ಅರ್ಧಕ್ಕೆ ನಿಲ್ಲಿಸಿದ್ದಾರೆ. ರಾತ್ರಿ 10 ಗಂಟೆಯ ನಂತರವೂ ಸಂಗೀತ ಕಾರ್ಯಕ್ರಮ ಮುಂದುವರಿಸಿದ ಕಾರಣ ಪೊಲೀಸರು ಮಧ್ಯೆ ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರ ರಾತ್ರಿ ಮಹಾರಾಷ್ಟ್ರದ ಪುಣೆಯ ರಾಜಾ ಬಹದ್ದೂರ್ ಮಿಲ್‌ನಲ್ಲಿ ರೆಹಮಾನ್‌ ಅವರ ಲೈವ್‌ ಕನ್ಸರ್ಟ್‌ ಅನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರೆಹಮಾನ್‌ ಅವರ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. ರಾತ್ರಿ 8 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ ರಾತ್ರಿ 10 ಗಂಟೆಯ ನಂತರವೂ ಮುಂದುವರೆದಿತ್ತು.

ಲೈವ್‌ ಕನ್ಸರ್ಟ್‌ ನಡೆಯುತ್ತಿರುವ ವೇಳೆಯೇ ಪೊಲೀಸರೊಬ್ಬರು ವೇದಿಕೆ ಮೇಲೆ ಬಂದಿದ್ದಾರೆ. ಸನ್ನೆ ಮೂಲಕ ತಮ್ಮ ಕೈಗಡಿಯಾರವನ್ನು ತೋರಿಸಿ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಕಲಾವಿದರಿಗೆ ಹೇಳಿದ್ದಾರೆ. ಎ. ಆರ್‌ ರೆಹಮಾನ್ ಬಳಿ ಬಂದು ಕಾರ್ಯಕ್ರಮ ನಿಲ್ಲಿಸುವಂತೆ ಕೇಳಿದ್ದಾರೆ. ಈ ದೃಶ್ಯದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ADVERTISEMENT

‘ರಾತ್ರಿ 10 ಗಂಟೆಯ ನಂತರವೂ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಸಮಯದ ಗಡುವು ಮುಗಿದಿದ್ದರಿಂದ ನಾವು ಅವರಿಗೆ (ರೆಹಮಾನ್) ಮತ್ತು ಇತರ ಕಲಾವಿದರಿಗೆ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಹೇಳಿದೆವು. ನಮ್ಮ ಮನವಿಯನ್ನು ಗೌರವಿಸಿ ಕಾರ್ಯಕ್ರಮ ನಿಲ್ಲಿಸಿದ್ದಾರೆ‘ ಎಂದು ಪೊಲೀಸ್‌ ಅಧಿಕಾರಿ ಸಂತೋಷ್‌ ಪಾಟೀಲ್‌ ಹೇಳಿದರು.

ಈ ಸಂಬಂಧ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.