ನವದೆಹಲಿ: ದೆಹಲಿಯ ಉತ್ತರ ಭಾಗದಲ್ಲಿರುವ ಇಂದ್ರಲೋಕ ಪ್ರದೇಶದಲ್ಲಿ ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ಕೆಲವರನ್ನು ಸಬ್ ಇನ್ಸ್‌ಪೆಕ್ಟರ್‌ವೊಬ್ಬರು ಬಲವಾಗಿ ತಳ್ಳಿ, ಒದ್ದ ಹಿನ್ನೆಲೆಯಲ್ಲಿ ನೂರಾರು ಜನರು ಶುಕ್ರವಾರ ಪ್ರತಿಭಟಿಸಿದರು. ಇದರ ಬೆನ್ನಲ್ಲೇ ಸಬ್ ಇನ್‌ಸ್ಪೆಕ್ಟರ್ ಅನ್ನು ಅಮಾನತು ಮಾಡಲಾಗಿದೆ.
ಮನೋಜ್ ಕುಮಾರ್ ತೋಮರ್ ಅಮಾನತುಗೊಂಡಿರುವ ಇನ್‌ಸ್ಪೆಕ್ಟರ್.
ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ರಾಜಕೀಯ ಮುಖಂಡರು ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಈ ಕೃತ್ಯವನ್ನು ಖಂಡಿಸಿದ್ದಾರೆ.
ಇಂದ್ರಲೋಕ ಮೆಟ್ರೊ ನಿಲ್ದಾಣ ಬಳಿ ಮಧ್ಯಾಹ್ನ 2ರ ಹೊತ್ತಿಗೆ ಈ ಘಟನೆ ನಡೆದಿದೆ. ಮೆಟ್ರೊ ನಿಲ್ದಾಣ ಸಮೀಪದ ಮಸೀದಿ ಬಳಿಯ ರಸ್ತೆಯಲ್ಲಿ ಕೆಲವರು ನಮಾಜ್ ಮಾಡಲು ಮುಂದಾಗಿದ್ದಾಗ, ಅವರನ್ನು ಚದುರಿಸಲು ಮನೋಜ್‌ಕುಮಾರ್ ಯತ್ನಿಸಿದರು. ದಿಢೀರನೆ ಕೋಪಗೊಂಡಂತೆ ಕಂಡುಬಂದ ಅವರು ಕೆಲವರನ್ನು ಬಲವಾಗಿ ನೂಕಿ, ಒದೆಯುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ.
ನಂತರ ಭಾರಿ ಸಂಖ್ಯೆಯಲ್ಲಿ ಜನರು ಸೇರಿ, ಪ್ರತಿಭಟನೆ ನಡೆಸಿದರಲ್ಲದೇ, ರಸ್ತೆ ಬಂದ್ ಮಾಡಿದರು. ತೋಮರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಜಂಟಿ ಪೊಲೀಸ್ ಕಮಿಷನರ್ (ಕೇಂದ್ರ ವಲಯ) ಪರ್ಮಾದಿತ್ಯ ಹಾಗೂ ಹೆಚ್ಚುವರಿ ಪೊಲೀಸ್ ಕಮಿಷನರ್ (ಪೂರ್ವ ವಲಯ) ಸಾಗರ್ ಸಿಂಗ್ ಕಾಲ್ಸಿ ಅವರು, ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.