ADVERTISEMENT

ಪ್ರಧಾನಿ ಮೋದಿ ಹತ್ಯೆ ಸಂಚು ಆರೋಪ: ತೆಲುಗು ಲೇಖಕ ವರವರ ರಾವ್‌ ಬಂಧನ

ಏಜೆನ್ಸೀಸ್
Published 28 ಆಗಸ್ಟ್ 2018, 10:02 IST
Last Updated 28 ಆಗಸ್ಟ್ 2018, 10:02 IST
ವರವರ ರಾವ್‌
ವರವರ ರಾವ್‌   

ಹೈದರಾಬಾದ್: ನಕ್ಸಲೀಯರಿಗೆ ನೆರವು ಮತ್ತು ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ಹೂಡಿರುವ ಆರೋಪದಲ್ಲಿ ತೆಲುಗಿನ ಕ್ರಾಂತಿಕಾರಿ ಲೇಖಕ ವರವರ ರಾವ್‌ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೈದರಾಬಾದ್‌ನ ಹಲವೆಡೆ ಶೋಧ ನಡೆಸಿರುವ ಪುಣೆ ಪೊಲೀಸರು ವರವರ ರಾವ್‌ ಅವರನ್ನು ಬಂಧಿಸಿದ್ದಾರೆ.

ಹೈದರಾಬಾದ್‌ನಲ್ಲಿರುವ ವರವರ ರಾವ್ ನಿವಾಸಕ್ಕೆ ದಾಳಿ ನಡೆಸಿದ ಪೊಲೀಸರು ಕೆಲವು ಗಂಟೆಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಿ ನಂತರ ಬಂಧಿಸಿದ್ದಾರೆ.

ರಾವ್ ಹೊರತುಪಡಿಸಿ, ಪತ್ರಕರ್ತರಾದ ಕೆ.ವಿ. ಕುಮಾರನಾಥ್, ಕ್ರಾಂತಿ ತೆಕುಲ, ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ (ಎಎಫ್‌ಎಲ್‌ಯು) ಪ್ರಾಧ್ಯಾಪಕ ಕೆ. ಸತ್ಯನಾರಾಯಣ ಅವರ ಮನೆ ಮೇಲೂ ಪೊಲೀಸರು ದಾಳಿ ಮಾಡಿ ಶೋಧ ನಡೆಸಿದ್ದಾರೆ.

ರಾವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಎಡಪಕ್ಷಗಳ ನಾಯಕರು ಖಂಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚಿಗೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಕಾರ್ಯಕರ್ತ ರೋನಾ ಜಾಕೋಬ್‌ ವಿಲ್ಸನ್‌ ಅವರ ದೆಹಲಿಯ ಮನೆಯಿಂದ ವಶಪಡಿಸಿಕೊಳ್ಳಲಾದ ಪತ್ರಗಳಲ್ಲಿ ವರವರ ರಾವ್‌ ಅವರ ಹೆಸರು ಪ್ರಸ್ತಾಪವಾಗಿದೆ ಎಂದು ಪುಣೆಯ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಇತ್ತೀಚೆಗೆ ತಿಳಿಸಿದ್ದರು. ನಕ್ಸಲೀಯರ ಸಂಘಟನೆ ಮತ್ತು ಅವರು ನಡೆಸುವ ದಾಳಿಗೆ ಹಣಕಾಸಿನ ನೆರವು ಒದಗಿಸಿರುವ ಬಗ್ಗೆಯೂ ರಾವ್ ವಿರುದ್ಧ ಆರೋಪವಿದೆ.

ಆದರೆ, ತಮ್ಮ ಮೇಲಿನ ಆರೋಪ ನಿರಾಕರಿಸಿದ್ದ ರಾವ್, ‘‘ಕೋರೆಗಾಂವ್‌ ದಲಿತ ಹೋರಾಟ’’ಕ್ಕೆ ಮಾವೊವಾದಿಗಳು ಮತ್ತು ನಕ್ಸಲೀಯರ ಜತೆ ನಂಟು ಕಲ್ಪಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೋರಾಟದ ಹಾದಿಯ ದಿಕ್ಕು ತಪ್ಪಿಸುತ್ತಿದೆ ಎಂದು ವರವರ ರಾವ್ ಇತ್ತೀಚೆಗೆ ಆರೋಪಿಸಿದ್ದರು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.