ಪುಣೆ: ಅಂಗವೈಕಲ್ಯ (ಪಿಡಬ್ಲ್ಯುಬಿಡಿ) ಮತ್ತು ಒಬಿಸಿ ಕೋಟಾವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ವಿವಾದಿತ ಐಎಎಸ್ ಪ್ರೊಬೇಷನರಿ ಅಧಿಕಾರಿ ಡಾ.ಪೂಜಾ ಖೇಡ್ಕರ್ ಅವರು ಸಲ್ಲಿಸಿದ್ದ ವೈದ್ಯಕೀಯ ಪ್ರಮಾಣಪತ್ರಗಳ ಸತ್ಯಾಸತ್ಯತೆ ಬಗ್ಗೆ ಪುಣೆ ಪೊಲೀಸರು ತನಿಖೆ ನಡೆಸಲಿದ್ದಾರೆ.
ಖೇಡ್ಕರ್ ಅವರು ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಸಲ್ಲಿಸಿದ್ದ ವೈದ್ಯಕೀಯ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ಅಂಗವಿಕಲ ಆಯುಕ್ತರ ಕಾರ್ಯಾಲಯವು ಪುಣೆ ಪೊಲೀಸರು ಮತ್ತು ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.
ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ, ‘ಅಂಗವಿಕಲ ಆಯುಕ್ತರ ಕಚೇರಿಯು ನಮಗೆ ಪತ್ರ ಬರೆದಿದೆ. ಪೂಜಾ ಖೇಡ್ಕರ್ ಅವರು ಸಲ್ಲಿಸಿದ ಪ್ರಮಾಣಪತ್ರಗಳು ಅಧಿಕೃತವಾಗಿವೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಈ ಎಲ್ಲ ಪ್ರಮಾಣಪತ್ರಗಳನ್ನು ಪಡೆದು, ಅವುಗಳನ್ನು ಯಾವ ವೈದ್ಯರು ಮತ್ತು ಆಸ್ಪತ್ರೆಗಳಿಂದ ಪಡೆಯಲಾಗಿದೆ ಎಂಬುದನ್ನು ಪರಿಶೀಲಿಸುತ್ತೇವೆ’ ಎಂದಿದ್ದಾರೆ.
2023ನೇ ಸಾಲಿನ ಐಎಎಸ್ ಅಧಿಕಾರಿಯಾಗಿರುವ ಖೇಡ್ಕರ್ ಅವರನ್ನು ಸದ್ಯ ವಾಶೀಂ ಜಿಲ್ಲೆಗೆ ವರ್ಗಾವಣೆಯಾಗಿದ್ದು, ಅವರು ಕೇಂದ್ರ ಲೋಕಸೇವಾ ಆಯೋಗಕ್ಕೆ ಸಲ್ಲಿಸಿದ ವೈದ್ಯಕೀಯ ಪ್ರಮಾಣಪತ್ರದಲ್ಲಿ ತಾವು ಭಾಗಶಃ ಅಂಗವೈಕಲ್ಯದಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಈ ಮೂಲಕ ಅವರು ಅಂಗವೈಕಲ್ಯದ ಕೋಟಾ ಬಳಸಿಕೊಂಡಿದ್ದಾರೆ.
ಅಂಗವೈಕಲ್ಯ, ಇತರೆ ಹಿಂದುಳಿದ ವರ್ಗಗಳಡಿ ಮೀಸಲಾತಿಯನ್ನು ತಪ್ಪಾಗಿ ಪಡೆದುಕೊಂಡಿರುವ ಮತ್ತು ಪುಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪವನ್ನು ಪೂಜಾ ಖೇಡ್ಕರ್ ಎದುರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.