ತಿರುವನಂತಪುರಂ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ 18 ಪವಿತ್ರ ಮೆಟ್ಟಿಲುಗಳ ಮೇಲೆ ನಿಂತು ಪೊಲೀಸರು ಛಾಯಾಚಿತ್ರ ತೆಗೆಸಿಕೊಂಡಿದ್ದಾರೆ. ದೇವಾಲಯದ ಕಟ್ಟುಪಾಡುಗಳನ್ನು ಪಾಲಿಸುವಂತೆ ಕೇರಳ ಹೈಕೋರ್ಟ್ ಸೂಚಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಮಂಗಳವಾರ ಮೊದಲ ಹಂತದ ಕರ್ತವ್ಯ ಮುಗಿದ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳ ತಂಡವು ಮೆಟ್ಟಿಲುಗಳ ಮೇಲೆ ಚಿತ್ರ ತೆಗೆಸಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರ ಹರಿದಾಡಿದ್ದು, ವಿವಿಧ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.
ಶಬರಿಮಲೆಯ ಮೆಟ್ಟಿಲುಗಳನ್ನು ಭಕ್ತರು ಪವಿತ್ರ ಎಂದೇ ನಂಬುತ್ತಾರೆ. ಭಕ್ತರು ದೇವಾಲಯಕ್ಕೆ ಏರುವ ವೇಳೆ ದೇವರಿಗೆ ಮುಖಮಾಡಿಯೇ ಏರುವ ಪದ್ಧತಿಯಿದೆ. ಆದರೆ, ಪೊಲೀಸರು ದೇವರಿಗೆ ಬೆನ್ನುಮಾಡಿ ಚಿತ್ರ ತೆಗೆಸಿಕೊಂಡಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಹೈಕೋರ್ಟ್, ಪೊಲೀಸ್ ಅಧಿಕಾರಿಗಳ ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ದೇವಾಲಯದ ಆವರಣದ ಒಳಗೆ ಭಕ್ತರು ಮೊಬೈಲ್ ಬಳಸಿ ಚಿತ್ರೀಕರಣ ಮಾಡಿಸುವ ಕುರಿತು ಕೂಡ ಸಮಗ್ರ ವರದಿ ನೀಡುವಂತೆ ದೇವಾಲಯದ ಅಧಿಕಾರಿಗಳಿಗೆ ತಿಳಿಸಿದೆ.
ಘಟನೆ ಕುರಿತು ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಬರಿಮಲೆ ದೇವಾಲಯದ ಭದ್ರತೆಯ ಉಸ್ತುವಾರಿ ಹೆಚ್ಚುವರಿ ಡಿಜಿಪಿ ಎಸ್. ಶ್ರೀಜಿತ್ ಸೂಚನೆ ನೀಡಿದ್ದಾರೆ.
‘ಪೊಲೀಸರು ಪವಿತ್ರ ಮೆಟ್ಟಿಲುಗಳ ಮೇಲೆ ನಿಂತು ಚಿತ್ರೀಕರಣ ಮಾಡಿರುವುದು ಧಾರ್ಮಿಕ ನಂಬಿಕೆಗಳಿಗೆ ಘಾಸಿ ಉಂಟುಮಾಡಿದೆ’ ಎಂದು ಹಿಂದೂ ಐಕ್ಯವೇದಿ ರಾಜ್ಯ ಘಟಕದ ಅಧ್ಯಕ್ಷ ಆರ್.ವಿ.ಬಾಬು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.