ADVERTISEMENT

ನ್ಯಾಯಮೂರ್ತಿಗೆ ರಾಜಕೀಯ ಧೋರಣೆ ಇರಕೂಡದು: ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 16:29 IST
Last Updated 17 ನವೆಂಬರ್ 2024, 16:29 IST
ಬಿ.ವಿ. ನಾಗರತ್ನ
ಬಿ.ವಿ. ನಾಗರತ್ನ   

ಚೆನ್ನೈ: ‘ನ್ಯಾಯಾಂಗದ ಅಧಿಕಾರವನ್ನು ಯಾರ ಒತ್ತಡಕ್ಕೂ ಮಣಿಯದೇ ಸ್ವತಂತ್ರವಾಗಿ ಚಲಾಯಿಸುವುದು ನ್ಯಾಯಮೂರ್ತಿಯೊಬ್ಬರಿಗೆ ಇರುವ ಪರಮಾಧಿಕಾರ ಮಾತ್ರವಲ್ಲ ಅದು ಅವರ ಆದ್ಯ ಕರ್ತವ್ಯವೂ ಆಗಿದೆ’ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಭಿಪ್ರಾಯಪಟ್ಟರು.

ಭಾನುವಾರ ಆಯೋಜನೆಗೊಂಡಿದ್ದ ನ್ಯಾಯಮೂರ್ತಿ ಎಸ್‌. ನಟರಾಜನ್‌ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನ್ಯಾಯಮೂರ್ತಿಯೊಬ್ಬರು ಕಾನೂನನ್ನು ತಾವು ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ ಅಥವಾ ವ್ಯಾಖ್ಯಾನಿಸುತ್ತಾರೆ, ಅವರ ಆತ್ಮಸಾಕ್ಷಿ ಏನು ಹೇಳುತ್ತದೆ ಎನ್ನುವುದರ ಮೇಲೆ ನ್ಯಾಯಾಂಗ ಅಧಿಕಾರವನ್ನು ಚಲಾಯಿಸುತ್ತಾರೆ. ಅಧಿಕಾರವನ್ನು ಚಲಾಯಿಸುವ ವೇಳೆ ಬೇರೆಯವರ ಅಭಿಪ್ರಾಯಗಳಿಗೆ ಮಣಿಯಬಾರದು’ ಎಂದರು.

ADVERTISEMENT

‘ಅಂತಿಮವಾಗಿ, ನ್ಯಾಯಮೂರ್ತಿಯೊಬ್ಬರ ನಂಬಿಕೆ, ಧೈರ್ಯ ಹಾಗೂ ಅವರ ಸ್ವಾತಂತ್ರ್ಯವೇ ನ್ಯಾಯಾಂಗದ ಮುಂದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತವೆ’ ಎಂದರು.

‘ನ್ಯಾಯಾಂಗ ವ್ಯವಸ್ಥೆಯೊಳಗಿನ ಸ್ವಾತಂತ್ರ್ಯದ ಕುರಿತು ಮಾತನಾಡುವುದಾದರೆ, ಇಬ್ಬರು ನ್ಯಾಯಮೂರ್ತಿಗಳ ನಡುವಿನ ಭಿನ್ನ ನಿಲುವುಗಳು ಅಥವಾ ಭಿನ್ನಾಭಿಪ್ರಾಯಗಳನ್ನು ಆ ನ್ಯಾಯಮೂರ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ದೃಷ್ಟಿಕೋನದಿಂದಲೇ ನೋಡಬೇಕಾಗುತ್ತದೆ. ವ್ಯವಸ್ಥೆಯೊಳಗಿನ ಈ ಅಭಿವ್ಯಕ್ತಿ ಸ್ವಾತಂತ್ರ್ಯವೇ ನ್ಯಾಯಾಂಗದ ಪ್ರಬುದ್ಧತೆಯನ್ನು ಸೂಚಿಸುತ್ತದೆ’ ಎಂದರು.

‘ರಾಜಕೀಯ ಅಭಿಪ್ರಾಯಗಳಿಂದ ದೂರ ಇರುವುದು, ನಿಷ್ಪಕ್ಷಪಾತವಾಗಿರುವುದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಬಹಳ ಮುಖ್ಯವಾಗಿರುವ ಅಂಶವಾಗುತ್ತದೆ. ಇದನ್ನೇ ಹಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ನಿಷ್ಪಕ್ಷಪಾತವಾಗಿರುವುದು ಎಂದರೆ, ನ್ಯಾಯಮೂರ್ತಿಯೊಬ್ಬರು ತಮ್ಮ ನಿರ್ಧಾರವನ್ನು ಕಾನೂನು ಹಾಗೂ ತಮ್ಮ ಮುಂದಿರುವ ಸತ್ಯದ ಆಧಾರದಲ್ಲಿಯೇ ರೂಪಿಸಿಕೊಳ್ಳಬೇಕು. ಅರ್ಜಿದಾರರ ಪರ ಒಲವು–ನಿಲುವುಗಳ ಮೇಲೆ ನಿರ್ಧಾರ ರೂಪಿಸಿಕೊಳ್ಳಬಾರದು’ ಎಂದರು.

‘ನ್ಯಾಯಾಂಗಕ್ಕೇ ಪರಮ ಅಧಿಕಾರ’

ನ್ಯಾಯಾಂಗ ಹಾಗೂ ಕಾರ್ಯಾಂಗ ಅಧಿಕಾರ ವಿಭಜನೆಯ ಕುರಿತು ಮಾತನಾಡಿದ ನ್ಯಾಯಮೂರ್ತಿ ನಾಗರತ್ನ ಅವರು ‘ನ್ಯಾಯಾಂಗ ನಿರ್ಧಾರಗಳನ್ನು ಕಾರ್ಯಾಂಗವು ಸರಳವಾಗಿ ತಳ್ಳಿಹಾಕುವಂತಿಲ್ಲ’ ಎಂದರು.  ‘ಯಾವುದೇ ಕಾನೂನುಗಳಿಗೆ ತಿದ್ದುಪಡಿ ಮಾಡಿಕೊಳ್ಳುವ ಅಧಿಕಾರವನ್ನು ಕಾರ್ಯಾಂಗಕ್ಕೆ ನೀಡಲಾಗಿದೆ. ಹಾಗಿದ್ದರೂ ಕಾನೂನಿನ ವ್ಯಖ್ಯಾನ ಪ್ರಶ್ನೆ ಎದ್ದಾಗ ನ್ಯಾಯಾಂಗವು ಮಧ್ಯಪ್ರವೇಶಿಸಬಹುದು ಮತ್ತು ನ್ಯಾಯಾಂಗದ್ದೇ ಪರಮ ಅಧಿಕಾರವಾಗಿರುತ್ತದೆ. ಒಂದರ್ಥದಲ್ಲಿ ಕಾರ್ಯಾಂಗ ಹಾಗೂ ನ್ಯಾಯಾಂಗದ ನಡುವಿನ ಸಮತೋಲಿತ ಅಧಿಕಾರ ಹಂಚಿಕೆ ಇದು’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.