ನೊಯ್ಡಾ: ಇಲ್ಲಿನ ಹೌಸಿಂಗ್ ಸೊಸೈಟಿಯೊಂದರಲ್ಲಿ ಅಕ್ರಮವಾಗಿ ಕಟ್ಟಡ ಕಾಮಗಾರಿ ನಡೆಸಿದ್ದನ್ನು ಪ್ರಶ್ನಿಸಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ರಾಜಕಾರಣಿ ಶ್ರೀಕಾಂತ್ ತ್ಯಾಗಿ ಅವರನ್ನು ಮಂಗಳವಾರ ಮೀರತ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತ್ಯಾಗಿ ಅವರು ಮಹಿಳೆಯನ್ನು ನಿಂದಿಸಿ ಹಲ್ಲೆ ಮಾಡಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಘಟನೆ ಬಳಿಕ ಶುಕ್ರವಾರ ಸಂಜೆಯಿಂದ ತ್ಯಾಗಿ ತಲೆಮರೆಸಿಕೊಂಡಿದ್ದರು. ತ್ಯಾಗಿ ಬಂಧನಕ್ಕೆ ನೊಯ್ಡಾ ಪೊಲೀಸರು ₹ 25 ಸಾವಿರ ನಗದು ಬಹುಮಾನ ಘೋಷಿಸಿದ್ದರು.
ತ್ಯಾಗಿ ಅವರಿಗೆ ಉತ್ತರಪ್ರದೇಶ ಪೊಲೀಸರು ರಕ್ಷಣೆ ನೀಡಿದ್ದಾರೆ ಎನ್ನುವ ವಿವಾದಕ್ಕೆ ಸಂಬಂಧಿಸಿದಂತೆ 2020ರ ಫೆಬ್ರುವರಿಯ ಬಳಿಕ ಅವರಿಗೆ ಅಂಥ ಯಾವುದೇ ಭದ್ರತೆಯನ್ನು ಒದಗಿಸಲಾಗಿಲ್ಲ ಎಂದು ಅಲ್ಲಿನ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ ಕುಮಾರ್ ಲಖನೌದಲ್ಲಿ ತಿಳಿಸಿದ್ದಾರೆ.
ತ್ಯಾಗಿ ಜತೆಗೆ ಅವರ ಮೂವರು ಸಹಚರರನ್ನೂ ಬಂಧಿಸಲಾಗಿದೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ಯಾಗಿ ಅವರ ಪತ್ನಿಯನ್ನು ಮಂಗಳವಾರ ಬೆಳಿಗ್ಗೆ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಶರಣಾಗತಿಯ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ತ್ಯಾಗಿ ಸೋಮವಾರ ಗೌತಮ್ ಬುದ್ಧ ನಗರದ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯ ವಿಚಾರಣೆಯು ಆಗಸ್ಟ್ 10ಕ್ಕೆ ನಿಗದಿಯಾಗಿದೆ. ತ್ಯಾಗಿ ನ್ಯಾಯಾಲಯದ ಮೊರೆ ಹೋಗುತ್ತಿದ್ದಂತೆಯೇ ನೊಯ್ಡಾ ಪೊಲೀಸರು ತಲೆಮರೆಸಿಕೊಂಡಿರುವ ತ್ಯಾಗಿ ಅವರನ್ನು ಬಂಧಿಸಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ನಾಪತ್ತೆಗೂ ಮುನ್ನ ತ್ಯಾಗಿ ತಾನು ಬಿಜೆಪಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಯುವ ಸಮಿತಿಯ ರಾಷ್ಟ್ರೀಯ ಸಹ ಸಂಯೋಜಕ ಎಂದು ಹೇಳಿಕೊಂಡಿದ್ದರು. ಆದರೆ, ತ್ಯಾಗಿ ಅವರೊಂದಿಗೆ ಯಾವುದೇ ಸಂಬಂಧ ಇರುವುದನ್ನು ಬಿಜೆಪಿ ನಿರಾಕರಿಸಿದೆ.
ಮಹಿಳೆಯ ಮೇಲಿನ ಹಲ್ಲೆಯ ಪ್ರಕರಣ ಕುರಿತು ಬಿಜೆಪಿಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ಹಿರಿಯ ನಾಯಕರ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು.
ನೊಯ್ದಾದ ಸೆಕ್ಟರ್–93 ‘ಬಿ’ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ತ್ಯಾಗಿ ನಿರ್ಮಿಸಿದ್ದ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಉತ್ತರಪ್ರದೇಶದ ಪೊಲೀಸರು ಸೋಮವಾರ ಬೆಳಿಗ್ಗೆ ನೆಲಸಮ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.