ADVERTISEMENT

ಗಾಂಧಿ ಕುಟುಂಬ ಅವಧಿ ಮೀರಿದ ಡ್ರಗ್ಸ್‌ ಇದ್ದಂತೆ: ಅಸ್ಸಾಂ ಸಿಎಂ ಹಿಮಂತ ಶರ್ಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2022, 2:28 IST
Last Updated 30 ಸೆಪ್ಟೆಂಬರ್ 2022, 2:28 IST
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ   

ನವದೆಹಲಿ: ದೇಶದಲ್ಲಿ ಗಾಂಧಿ ಕುಟುಂಬ ಎಂಬುದು ಅವಧಿ ಮೀರಿದ ಡ್ರಗ್ಸ್‌ ಇದ್ದಂತೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟೀಕಿಸಿದ್ದಾರೆ.

ಸುದ್ದಿಸಂಸ್ಥೆ ‘ಎಎನ್‌ಐ’ ಸಂದರ್ಶನದಲ್ಲಿ ಮಾತನಾಡಿರುವ ಶರ್ಮಾ, ‘2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬಿಜೆಪಿ ಹೆಚ್ಚು ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಹೇಳಿದ್ದಾರೆ.

ದೇಶದಲ್ಲಿ ಕಳೆದ ಎಂಟು ವರ್ಷಗಳಿಂದ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಹಲವು ಚುನಾವಣೆಗಳನ್ನು ಎದುರಿಸಿ ತೀವ್ರ ಹಿನ್ನಡೆ ಅನುಭವಿಸಿದೆ. ಅದನ್ನು ಗಮನಿಸಿದರೆ ಗಾಂಧಿ ಕುಟುಂಬದ ಸ್ಥಿತಿ (ಕಾಂಗ್ರೆಸ್‌) ಅವಧಿ ಮೀರಿದ ಡ್ರಗ್ಸ್‌ ಇದ್ದಂತೆ ಎಂದು ಶರ್ಮಾ ವ್ಯಂಗ್ಯವಾಡಿದ್ದಾರೆ.

ADVERTISEMENT

ಕಾಂಗ್ರೆಸ್ ಪಕ್ಷವನ್ನು ವಿರೋಧ ಪಕ್ಷದ ಸ್ಥಾನದಲ್ಲಿ ನೋಡಬಾರದು. ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ. ಏಕೆಂದರೆ ಅವರು ವಿರೋಧ ಪಕ್ಷದ ಸ್ಥಾನದಲ್ಲಿದ್ದೇವೆ ಎಂದು ಅವರು ಎಂದಿಗೂ ಭಾವಿಸುವುದಿಲ್ಲ. ನಮ್ಮದು ಆಡಳಿತ ಪಕ್ಷ ಎಂಬ ಭ್ರಮೆ ಕಾಂಗ್ರೆಸ್ಸಿಗರ ಮನಸ್ಸಿನಲ್ಲಿದ್ದು, ಪ್ರಧಾನಿ ಹುದ್ದೆ ತಮ್ಮ ಕುಟುಂಬಕ್ಕೆ ಸೇರಿದ್ದು ಎಂದು ಭಾವಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ಸಿಗರು ದೀರ್ಘ ಕಾಲ ವಿರೋಧ ಪಕ್ಷದ ಸ್ಥಾನದಲ್ಲೇ ಇರಲಿದ್ದಾರೆ’ ಎಂದು ಶರ್ಮಾ ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಕಾಂಗ್ರೆಸ್ ಇನ್ನೂ ಆಡಳಿತ ಪಕ್ಷ ಎಂದು ಭಾವಿಸುತ್ತಿದೆ. ಆದರೆ, ಬಿಜೆಪಿ ಆ ಅಧಿಕಾರವನ್ನು ಕಸಿದುಕೊಂಡು ಬಹಳ ದಿನಗಳಾಗಿವೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 356ನೇ ವಿಧಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ ಶರ್ಮಾ, ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಕುಟುಂಬಕ್ಕೆ ದೊಡ್ಡ ಸವಾಲಾಗಿದ್ದಾರೆ ಎಂದು ಕೊಂಡಾಡಿದ್ದಾರೆ.

ಎರಡು ಲೋಕಸಭೆ ಚುನಾವಣೆಗಳು ಸೇರಿದಂತೆ 2014ರ ನಂತರ ನಡೆದ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ಮಾಡಿದೆ. ಜತೆಗೆ, ಇತ್ತೀಚೆಗೆ ಹಲವು ಹಿರಿಯ ನಾಯಕರು ಪಕ್ಷವನ್ನು ತೊರೆದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆ ನಡೆಯುತ್ತಿರುವುದು ಕುತೂಹಲ ಕೆರಳಿಸಿದೆ.

ಇತ್ತ ರಾಹುಲ್‌ ಗಾಂಧಿ ‘ಭಾರತ್ ಜೋಡೊ ಯಾತ್ರೆ’ಯಲ್ಲಿ ವ್ಯಸ್ತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.