ADVERTISEMENT

ಅಭಿವೃದ್ಧಿಗೆ ತುಷ್ಟೀಕರಣ ರಾಜಕಾರಣವೇ ದೊಡ್ಡ ಅಡ್ಡಿ: ಪ್ರಧಾನಿ ಮೋದಿ

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಮೆಗೆ ಗೌರವಾರ್ಪಣೆ * ಏಕತಾನಗರ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ

ಪಿಟಿಐ
Published 31 ಅಕ್ಟೋಬರ್ 2023, 13:02 IST
Last Updated 31 ಅಕ್ಟೋಬರ್ 2023, 13:02 IST
<div class="paragraphs"><p>ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಗುಜರಾತ್‌ನ ಕೆವಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನಮನಿಸಿದರು </p></div>

ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಗುಜರಾತ್‌ನ ಕೆವಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನಮನಿಸಿದರು

   

–ಪಿಟಿಐ ಚಿತ್ರ 

ಕೆವಡಿಯಾ (ಗುಜರಾತ್): ದೇಶದ ಅಭಿವೃದ್ಧಿಯ ಪಯಣಕ್ಕೆ ತುಷ್ಟೀಕರಣ ರಾಜಕಾರಣವೇ ದೊಡ್ಡ ಅಡಚಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.

ADVERTISEMENT

ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಅಂಗವಾಗಿ ನರ್ಮದಾ ಜಿಲ್ಲೆಯ ಕೆವಡಿಯಾದಲ್ಲಿರುವ ಪಟೇಲರ ಪ್ರತಿಮೆಗೆ (ಏಕತಾ ಪ್ರತಿಮೆ) ಗೌರವಾರ್ಪಣೆ ಮಾಡಿದ ನಂತರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಪಟೇಲ್ ಅವರ ಜನ್ಮ ದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತದೆ.

‘ದೇಶದಲ್ಲಿ ಬಹುದೊಡ್ಡ ರಾಜಕೀಯ ವರ್ಗವೊಂದಿದೆ. ಅದಕ್ಕೆ ಸಕಾರಾತ್ಮಕ ರಾಜಕಾರಣ ಮಾಡಲು ಬರುವುದಿಲ್ಲ. ಜೊತೆಗೆ, ಸ್ವಾರ್ಥದಿಂದ ಕೂಡಿದ ತನ್ನ ಉದ್ದೇಶ ಸಾಧನೆಗೆ ಈ ವರ್ಗ ದೇಶದ ಏಕತೆಯನ್ನೇ ಅಪಾಯಕ್ಕೆ ಒಡ್ಡುವ ಕೆಲಸ ಮಾಡುತ್ತಿದೆ’ ಎಂದು ವಿರೋಧ ಪಕ್ಷಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

‘ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ದೇಶವು ಆಂತರಿಕವಾಗಿ ವಿವಿಧ ರಂಗಗಳ ಮೂಲಕ ಬೆದರಿಕೆಯನ್ನು ಎದುರಿಸುತ್ತಿದೆ. ಆದರೆ, ದೇಶದ ಭದ್ರತಾ ಪಡೆಗಳ ಪರಿಶ್ರಮದ ಫಲವಾಗಿ ದೇಶದ ಈ ಶತ್ರುಗಳಿಗೆ ಯಶಸ್ಸು ಸಿಗುತ್ತಿಲ್ಲ’ ಎಂದು ಮೋದಿ ಹೇಳಿದರು.

‘ದೇಶದ ಪಾಲಿಗೆ ಮುಂದಿನ 25 ವರ್ಷಗಳು ಬಹಳ ಮಹತ್ವದ ಅವಧಿಯಾಗಿದೆ. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ತತ್ವ–‌ಬೋಧನೆಗಳಿಂದ ಪ್ರೇರಣೆ ಪಡೆಯುವ ಮೂಲಕ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು’ ಎಂದರು.

‘ತುಷ್ಟೀಕರಣ ಮಾಡುವವರು ಭಯೋತ್ಪಾದಕರ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವುದನ್ನು ಅಲಕ್ಷಿಸುತ್ತಾರೆ. ದೇಶ ವಿರೋಧಿ ಶಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ. ಈ ತುಷ್ಟೀಕರಣ ಮನಸ್ಥಿತಿ ಎಷ್ಟರ ಮಟ್ಟಿಗೆ ಅಪಾಯಕಾರಿ ಅಂದರೆ, ಉಗ್ರರನ್ನು ರಕ್ಷಣೆ ಮಾಡುವುದಕ್ಕಾಗಿ ಅವರು ಕೋರ್ಟ್‌ಗಳ ಕದ ತಟ್ಟುತ್ತಾರೆ. ಇಂತಹ ಆಲೋಚನೆಗಳಿಂದ ಯಾವುದೇ ಸಮುದಾಯಕ್ಕೆ ಹಾಗೂ ದೇಶಕ್ಕೆ ಪ್ರಯೋಜನವಾಗದು’ ಎಂದು ಮೋದಿ ಹೇಳಿದರು.

ಶಿಲಾನ್ಯಾಸ: ಏಕತಾ ಪ್ರತಿಮೆ ಇರುವ ಏಕತಾನಗರದಲ್ಲಿ ₹ 160 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ಮೋದಿ, ಕೆಲ ಯೋಜನೆಗಳಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು.

ಆಸ್ಪತ್ರೆ ನಿರ್ಮಾಣ ಹಾಗೂ ಸೌರ ವಿದ್ಯುತ್‌ ಘಟಕಕ್ಕೆ ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಶಿಲಾನ್ಯಾಸ ನೆರವೇರಿಸಿದರು.

ಏಕತಾನಗರ ಹಾಗೂ ಅಹಮದಾಬಾದ್‌ ಸಂಪರ್ಕಿಸುವ ಪಾ‌ರಂಪರಿಕ ರೈಲು ಮಾರ್ಗ, ನರ್ಮದಾ ಆರತಿಯ ನೇರ ಪ್ರಸಾರ, ಡ್ರ್ಯಾಗನ್‌ ಫ್ರೂಟ್‌ ಕೃಷಿಗಾಗಿ ಕಮಲಮ್ ಪಾರ್ಕ್, ಏಕತಾ ಪ್ರತಿಮೆ ತಲುಪಲು ಅನುಕೂಲವಾಗುವಂತೆ 30 ಎಲೆಕ್ಟ್ರಿಕಲ್ ಬಸ್‌ಗಳೂ, 210 ಇ–ಸೈಕಲ್‌ಗಳ ಸೇವೆಯನ್ನು ಈ ಯೋಜನೆ ಒಳಗೊಂಡಿದೆ.

‘ಪಟೇಲರ ದೂರದೃಷ್ಟಿಯಿಂದಾಗ ಭಾರತ ಒಂದಾಗಿದೆ’

ನವದೆಹಲಿ: ‘ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ದೇಶವು ಒಗ್ಗೂಡಿದೆ. ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ ಅವಿಸ್ಮರಣೀಯ ಕೊಡುಗೆಯೇ ಇದಕ್ಕೆ ಕಾರಣ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಂಗಳವಾರ ಹೇಳಿದರು.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 148ನೇ ಜನ್ಮದಿನೋತ್ಸವ ಅಂ‌ಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ದೂರದೃಷ್ಟಿ ಮತ್ತು ಶ್ರಮ ಇಲ್ಲದಿದ್ದರೆ ನಾವು ಇಂದು ಒಟ್ಟಾಗಿ ಇರುತ್ತಿರಲಿಲ್ಲ. ಅವರ ಪರಿಶ್ರಮದಿಂದಾಗಿಯೇ 550 ಸಂಸ್ಥಾನಗಳು ಭಾರತ ಒಕ್ಕೂಟದಲ್ಲಿ ವಿಲೀನಗೊಳ್ಳುವುದಕ್ಕೆ ಸಾಧ್ಯವಾಯಿತು’ ಎಂದು ಹೇಳಿದರು.

ಗುಜರಾತ್‌ನ ಕೆವಡಿಯಾದಲ್ಲಿ ವಿಶ್ವದಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ ಪಟೇಲ್‌ ಅವರಿಗೆ ತಕ್ಕ ಗೌರವ ನೀಡಿದ್ದಾರೆ ಎಂದು ಶಾ ಹೇಳಿದರು.

ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುವ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರ ಜನ್ಮದಿನದಂದು ಮಂಗಳವಾರ ಪಟೇಲ್‌ ಪ್ರತಿಮೆಗೆ ಗೌರವ ಸಲ್ಲಿಸಿದ ನಂತರ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು

ಬಿಎಸ್‌ಎಫ್‌ ಯೋಧರು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಮೆಗೆ ಮಂಗಳವಾರ ಗೌರವ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.