ADVERTISEMENT

LS polls | BJP ಕಾರ್ಯಕರ್ತರ ‘ಅತಿಯಾದ ಆತ್ಮವಿಶ್ವಾಸ’ ಮುಳುವಾಯಿತು: ‘ಆರ್ಗನೈಸರ್’

ವಾಸ್ತವಾಂಶ ತೆರೆದಿಟ್ಟ ಚುನಾವಣೆ

ಪಿಟಿಐ
Published 11 ಜೂನ್ 2024, 14:22 IST
Last Updated 11 ಜೂನ್ 2024, 14:22 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶವು ‘ಅತಿಯಾದ ಆತ್ಮವಿಶ್ವಾಸ’ ಹೊಂದಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೆ ವಾಸ್ತವಾಂಶದ ದರ್ಶನ ಮಾಡಿಸಿಕೊಟ್ಟಿದೆ ಎಂದು ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಸರ್‌’ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಲೇಖನದಲ್ಲಿ ವಿಶ್ಲೇಷಿಸಲಾಗಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರು 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಬೇಕೆಂದು ಹೇಳುತ್ತಿದ್ದುದು, ತಮಗೆ ನೀಡಿದ ಗುರಿ ಎಂಬುದು ಪಕ್ಷದ ಹೆಚ್ಚಿನ ಕಾರ್ಯಕರ್ತರಿಗೆ ತಿಳಿಯಲೇ ಇಲ್ಲ’ ಎಂದು ರತನ್‌ ಶಾರ್ದಾ ಅವರು ತಮ್ಮ ಲೇಖನದಲ್ಲಿ ಬರೆದಿದ್ದಾರೆ. 

ADVERTISEMENT

ಈ ಬಾರಿ 240 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಸ್ವಂತ ಬಲದಿಂದ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಎನ್‌ಡಿಎ ಮೈತ್ರಿಕೂಟ 293 ಸ್ಥಾನಗಳನ್ನು ಗೆದ್ದ ಕಾರಣ ಮೋದಿ ಅವರು ಸತತ ಮೂರನೇ ಬಾರಿ ಪ್ರಧಾನಿ ಹುದ್ದೆಗೇರಿದ್ದಾರೆ.

‘ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ನಡೆಸುವ ಮೂಲಕ ಗುರಿಗಳನ್ನು ಈಡೇರಿಸಬಹುದೇ ಹೊರತು, ಪೋಸ್ಟರ್‌ಗಳು ಮತ್ತು ಸೆಲ್ಫಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೆಲವು ಮುಖಂಡರು ಮೋದಿ ಅವರ ವರ್ಚಸ್ಸನ್ನು ತಮ್ಮ ಲಾಭಕ್ಕೆ ಬಳಸಿಕೊಂಡರೇ ಹೊರತು, ಜನರ ಧ್ವನಿಗೆ ಯಾರೂ ಕಿವಿಯಾಗಲಿಲ್ಲ’ ಎಂದು ಟೀಕಿಸಿದ್ದಾರೆ. 

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯು ನಿರೀಕ್ಷೆಗಿಂತ ಕಡಿಮೆ ಸ್ಥಾನಗಳನ್ನು ಗೆಲ್ಲಲು ‘ಅನಗತ್ಯ ರಾಜಕಾರಣ’ ಕೂಡಾ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. 

‘ಬಿಜೆಪಿಯ ಅನಾವಶ್ಯಕ ರಾಜಕಾರಣಕ್ಕೆ ಮಹಾರಾಷ್ಟ್ರದಲ್ಲಿ ನಡೆದ ಬೆಳವಣಿಗೆ ಉತ್ತಮ ಉದಾಹರಣೆಯಾಗಿದೆ. ಬಿಜೆಪಿ ಮತ್ತು ವಿಭಜಿತ ಶಿವಸೇನಾಗೆ ಸ್ಪಷ್ಟ ಬಹುಮತ ಇದ್ದರೂ, ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿಯನ್ನು ಸೇರಿಸಿಕೊಳ್ಳಲಾಯಿತು. ಮುಂದಿನ ಒಂದೆರಡು ವರ್ಷಗಳಲ್ಲಿ ಶರದ್‌ ಪವಾರ್‌ ವರ್ಚಸ್ಸು ಕಡಿಮೆಯಾಗುತ್ತಿತ್ತಲ್ಲದೆ, ಅವರ ಕುಟುಂಬದೊಳಗಿನ ಕಚ್ಚಾಟದಿಂದಾಗಿ ಎನ್‌ಸಿಪಿ ತನ್ನ ಶಕ್ತಿ ಕಳೆದುಕೊಳ್ಳುತ್ತಿತ್ತು’ ಎಂದಿದ್ದಾರೆ.

‘ಇವೆಲ್ಲದರ ನಡುವೆಯೂ ಎನ್‌ಸಿಪಿಯನ್ನು (ಅಜಿತ್‌ ಪವಾರ್‌ ಬಣ) ಸೆಳೆದುಕೊಳ್ಳುವ ನಿರ್ಧಾರ ಕೈಗೊಂಡದ್ದು ಏಕೆ? ಕಾಂಗ್ರೆಸ್‌ ಸಿದ್ಧಾಂತದ (ಎನ್‌ಸಿಪಿ) ವಿರುದ್ಧ ಹಲವು ವರ್ಷಗಳಿಂದ ಹೋರಾಡಿದ್ದ ಬಿಜೆಪಿ ಕಾರ್ಯಕರ್ತರಿಗೆ ಇದು ನೋವುಂಟು ಮಾಡಿತು. ಒಂದು ಕೆಟ್ಟ ನಿರ್ಧಾರದಿಂದ ಬಿಜೆಪಿ ತನ್ನ ಬ್ರಾಂಡ್‌ ಮೌಲ್ಯ ಕಳೆದುಕೊಂಡಿತು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.