ADVERTISEMENT

Maharashtra Council Elections: ‘ಮಹಾಯುತಿ’ ಮೈತ್ರಿಕೂಟಕ್ಕೆ 9 ಸ್ಥಾನ

ಮಹಾರಾಷ್ಟ್ರ: ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ

ಪಿಟಿಐ
Published 12 ಜುಲೈ 2024, 15:45 IST
Last Updated 12 ಜುಲೈ 2024, 15:45 IST
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಮತದಾನ ಮಾಡಿದರು –ಪಿಟಿಐ ಚಿತ್ರ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಮತದಾನ ಮಾಡಿದರು –ಪಿಟಿಐ ಚಿತ್ರ   

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಆಡಳಿತಾರೂಢ ‘ಮಹಾಯುತಿ’ ಮೈತ್ರಿಕೂಟವು ತಾನು ಸ್ಪರ್ಧಿಸಿದ ಎಲ್ಲ ಒಂಬತ್ತು ಸ್ಥಾನಗಳನ್ನು ಜಯಿಸಿದೆ.

ಮಹಾರಾಷ್ಟ್ರದ ಮಾಜಿ ಸಚಿವೆ ಪಂಕಜಾ ಮುಂಡೆ ಸೇರಿದಂತೆ ಬಿಜೆಪಿ ಕಣಕ್ಕಿಳಿಸಿದ್ದ ಐವರು ಗೆಲುವು ಸಾಧಿಸಿದರೆ, ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಮತ್ತು ಉಪ ಮುಖ್ಯಮಂತ್ರಿ ಅಜಿತ್‌ ಪವಾರ್ ನೇತೃತ್ವದ ಎನ್‌ಸಿಪಿ ತಲಾ ಎರಡು ಸ್ಥಾನಗಳನ್ನು ಗೆದ್ದುಕೊಂಡವು.

ವಿರೋಧ ಪಕ್ಷಗಳ ಮಹಾ ವಿಕಾಸ್‌ ಅಘಾಡಿ (ಎಂವಿಎ) ಮೈತ್ರಿಕೂಟ ಎರಡು ಸ್ಥಾನಗಳನ್ನು ಜಯಿಸಿತು. ಶಿವಸೇನಾದ (ಯುಬಿಟಿ) ಮಿಲಿಂದ್‌ ನರ್ವೇಕರ್‌ ಮತ್ತು ಕಾಂಗ್ರೆಸ್‌ನ ಪ್ರಜ್ಞಾ ಸಾತವ್‌ ಅವರು ಜಯ ಗಳಿಸಿದರು. ಮಿಲಿಂದ್‌ ಅವರು ಉದ್ಧವ್‌ ಠಾಕ್ರೆ ಅವರ ಆಪ್ತರೂ ಹೌದು.

ADVERTISEMENT

ಎಂವಿಎ ಬೆಂಬಲಿತ ಪಿಡಬ್ಲ್ಯುಪಿ ಅಭ್ಯರ್ಥಿ ಜಯಂತ್‌ ಪಾಟೀಲ್‌ ಸೋತರು. 11 ಸ್ಥಾನಗಳಿಗೆ ಒಟ್ಟು 12 ಸ್ಪರ್ಧಿಗಳು ಕಣದಲ್ಲಿದ್ದರು. ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸುವಷ್ಟು ಶಾಸಕರ ಸಂಖ್ಯೆ ಎಂವಿಎ ಮೈತ್ರಿಕೂಟದ ಬಳಿ ಇರಲಿಲ್ಲ. ಆದರೂ, ‘ಅಡ್ಡ ಮತದಾನದ’ ನಿರೀಕ್ಷೆಯೊಂದಿಗೆ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. 

ಪ್ರತಿ ಅಭ್ಯರ್ಥಿಯ ಗೆಲುವಿಗೆ ಮೊದಲ ಪ್ರಾಶಸ್ತ್ಯದ 23 ಮತಗಳು ಬೇಕಿದ್ದವು. ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ಮತದಾನ ಪ್ರಕ್ರಿಯೆ ನಡೆದಿದ್ದು, ಎಲ್ಲ 274 ಶಾಸಕರೂ ಮತ ಚಲಾಯಿಸಿದರು ಎಂದು ಅಧಿಕಾರಿಗಳು ತಿಳಿಸಿದರು. ವಿಧಾನಪರಿಷತ್‌ನ 11 ಸದಸ್ಯರ ಅವಧಿ ಜುಲೈ 27ರಂದು ಕೊನೆಗೊಳ್ಳಲಿದ್ದು, ತೆರವಾಗಲಿರುವ ಸ್ಥಾನಗಳನ್ನು ತುಂಬಲು ಈ ದ್ವೈವಾರ್ಷಿಕ ಚುನಾವಣೆ ನಡೆದಿದೆ. 

ಮಹಾರಾಷ್ಟ್ರ ವಿಧಾನಸಭೆಯಲ್ಲಿ 103 ಶಾಸಕರನ್ನು ಹೊಂದಿರುವ ಬಿಜೆಪಿಯು ಅತಿದೊಡ್ಡ ಪಕ್ಷ ಎನಿಸಿಕೊಂಡಿದೆ. ಶಿವಸೇನಾ (ಶಿಂದೆ ಬಣ) 38, ಅಜಿತ್‌ ಪವಾರ್ ನೇತೃತ್ವದ ಎನ್‌ಸಿಪಿ 42, ಕಾಂಗ್ರೆಸ್‌ 37, ಶಿವಸೇನಾ (ಯುಬಿಟಿ) 15 ಮತ್ತು ಎನ್‌ಸಿಪಿ (ಎಸ್‌ಪಿ) 10 ಶಾಸಕರನ್ನು ಹೊಂದಿವೆ.  

ಜೈಲಲ್ಲಿರುವ ಬಿಜೆಪಿ ಶಾಸಕ ಗಣಪತ್‌ ಮತದಾನ

ಕೊಲೆ ಯತ್ನ ಆರೋಪದಲ್ಲಿ ಬಂಧನದಲ್ಲಿರುವ ಬಿಜೆಪಿ ಶಾಸಕ ಗಣಪತ್‌ ಗಾಯಕವಾಡ್‌ ಅವರು ಎಂವಿಎ ಮೈತ್ರಿಕೂಟದ ತೀವ್ರ ಆಕ್ಷೇಪದ ನಡುವೆಯೂ ಮತದಾನ ಮಾಡಿದರು.  ಭೂ ವಿವಾದಕ್ಕೆ ಸಂಬಂಧಿಸಿದಂತೆ ಗಣಪತ್‌ ಅವರು ಠಾಣೆ ಜಿಲ್ಲೆಯ ಉಲ್ಲಾಸ್‌ನಗರದ ಹಿಲ್‌ ಲೈನ್‌ ಪೊಲೀಸ್‌ ಠಾಣೆಯಲ್ಲಿ ಗುಂಡು ಹಾರಿಸಿದ್ದರು. ಶಿವಸೇನಾದ (ಶಿಂದೆ ಬಣ) ಕಾರ್ಯಕರ್ತರಾದ ಮಹೇಶ್‌ ಗಾಯಕವಾಡ್‌ ಮತ್ತು ರಾಹುಲ್ ಪಾಟೀಲ್‌ ಅವರು ಗುಂಡೇಟಿನಿಂದ ಗಾಯಗೊಂಡಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಗಣಪತ್‌ ಅವರನ್ನು ತಲೋಜಾ ಜೈಲಿನಲ್ಲಿರಿಸಲಾಗಿದೆ.  ಗಾಯಕವಾಡ್‌ ಅವರಿಗೆ ಮತದಾನದ ಅವಕಾಶ ನೀಡಿದ್ದಕ್ಕೆ ಎಂವಿಎ ಆಕ್ಷೇಪ ವ್ಯಕ್ತಪಡಿಸಿತು. ಆದರೆ ಬಿಜೆಪಿ ಶಾಸಕ ಅತುಲ್‌ ಭಾತ್ಖಲ್ಕರ್ ‘ಗಾಯಕವಾಡ್‌ ಅವರು ನಿಯಮದ ಪ್ರಕಾರವೇ ಮತ ಚಲಾಯಿಸಿದರು’ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಜಯ್‌ ವಡೆಟ್ಟಿವಾರ್‌ ಮತ್ತು ವಿಧಾನ ಪರಿಷತ್‌ ವಿಪಕ್ಷ ನಾಯಕ ಅಂಬಾದಾಸ್ ದಾನ್ವೆ ಅವರು ಚುನಾವಣಾ ಆಯೋಗದ ಕ್ರಮವನ್ನು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.