ನವದೆಹಲಿ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ನಿನ್ನೆ (ಗುರುವಾರ) ನಡೆದ ಘಟನಾವಳಿಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.
ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಮುಖ್ತಾರ್ ಅಬ್ಬಾಸ್ ನಖ್ವಿ ಅವರನ್ನೊಳಗೊಂಡ ಬಿಜೆಪಿ ನಿಯೋಗವು ದೆಹಲಿಯ ಚುನಾವಣಾ ಆಯೋಗದ ಕಚೇರಿಗೆ ತೆರಳಿ ಮಮತಾ ಬ್ಯಾನರ್ಜಿ ವಿರುದ್ಧ ಶುಕ್ರವಾರ ದೂರು ದಾಖಲಿಸಿದೆ.
'ಮತದಾನ ಕೇಂದ್ರದಲ್ಲಿ ರಾಜ್ಯದ ಮುಖ್ಯಮಂತ್ರಿಯೊಬ್ಬರು ಧರಣಿ ಕುಳಿತಿದ್ದರು. ಅವರು ಅಲ್ಲಿಯೇ ಪತ್ರಿಕಾಗೋಷ್ಠಿಗಳನ್ನು ಸಹ ನಡೆಸುತ್ತಿದ್ದರು. ಅವರ ಬೆಂಗಲಿಗರು ಹೊರಗಿನಿಂದ ಕಲ್ಲು ಎಸೆಯುತ್ತಿದ್ದರು. ಇದು ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಡೆದ ಘಟನೆ' ಎಂದು ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ.
'ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮಕ್ಕೆ ತೆರಳುವ ಮೊದಲೇ ಅಲ್ಲಿ ಶೇ.74ರಷ್ಟು ಮತದಾನವು ಶಾಂತಿಯುತವಾಗಿಯೇ ನಡೆದಿತ್ತು. ನಾವು ನಂದಿಗ್ರಾಮದಲ್ಲಿ ನಡೆದಿರುವ ಘಟನಾವಳಿಗಳ ಬಗೆಗಿನ ಫೋಟೊಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದೇವೆ. ಆ ಮೂಲಕ ಮಮತಾ ಅವರ ವಿರುದ್ಧ ದೂರನ್ನೂ ದಾಖಲಿಸಿದ್ದೇವೆ' ಎಂದು ಜಾವಡೇಕರ್ ಹೇಳಿದ್ದಾರೆ.
ಗುರುವಾರ ನಂದಿಗ್ರಾಮದ ಬೋಯಲ್ ಮತಗಟ್ಟೆ ಸಂಖ್ಯೆ 7ರ ಸಮೀಪ ಗಾಲಿಕುರ್ಚಿಯಲ್ಲೇ ಕುಳಿತು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಮಮತಾ ಅವರು ವಾಗ್ದಾಳಿ ನಡೆಸಿದ್ದರು.
‘ನಾವು ಬೆಳಿಗ್ಗೆಯಿಂದ 63 ದೂರುಗಳನ್ನು ದಾಖಲಿಸಿದ್ದೇವೆ. ಆದರೆ ಆಯೋಗ ಇಲ್ಲಿವರೆಗೂ ಯಾವುದೇ ದೂರಿನ ಬಗ್ಗೆಯೂ ಕ್ರಮ ಕೈಗೊಂಡಿಲ್ಲ. ಇದು ಸರಿಯಾದ ಕ್ರಮವಲ್ಲ. ಈಗ ನಾವು ನ್ಯಾಯಾಲಯದ ಮೊರೆ ಹೋಗುತ್ತವೆ‘ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.