ನವದೆಹಲಿ: ಜನರಲ್ಲಿ ಕೋಮು ದ್ವೇಷ ಕೆರಳಿಸಿ ದೇಶವನ್ನು ಅಸ್ಥಿರಗೊಳಿಸುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಪ್ರಯತ್ನಗಳನ್ನು ಹತ್ತಿಕ್ಕುವ ಸಲುವಾಗಿ ದೇಶದ ಐದು ರಾಜ್ಯಗಳಲ್ಲಿ 14 ಕಡೆ ಭಾನುವಾರ ದಾಳಿ ನಡೆಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ.
ಈ ಕುರಿತು ಭಾನುವಾರ ಟ್ವೀಟ್ ಮಾಡಿರುವ ಎನ್‌ಐಎ, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ದಾಳಿ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದೆ. ಜಿಲ್ಲೆಯ ಯಾವ ಸ್ಥಳದಲ್ಲಿ ದಾಳಿ ನಡೆಸಲಾಗಿದೆ. ಯಾರನ್ನಾದರೂ ವಶಕ್ಕೆ ಪಡೆಯಲಾಗಿದೆಯೇ ಎಂಬ ವಿವರಗಳನ್ನು ಎನ್‌ಐಎ ಬಹಿರಂಗಪಡಿಸಿಲ್ಲ.
‘ಕೇರಳದ ಕಣ್ಣೂರು, ಮಲಪ್ಪುರಂ, ಕರ್ನಾಟಕದ ದಕ್ಷಿಣ ಕನ್ನಡ, ಮಹಾರಾಷ್ಟ್ರದ ನಾಸಿಕ್, ಕೊಲ್ಹಾಪುರ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಬಿಹಾರದ ಕಟಿಹಾರ್ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ದೇಶದ ಕೋಮು ಸಾಮರಸ್ಯವನ್ನು ಕದಡುವ ಉದ್ದೇಶದಿಂದ ಈ ನಿಷೇಧಿತ ಸಂಘಟನೆ ನಡೆಸುತ್ತಿರುವ ಪ್ರಯತ್ನಗಳನ್ನು ವಿಫಲಗೊಳಿಸಲು ದಾಳಿಯನ್ನು ಸಂಘಟಿಸಲಾಗಿತ್ತು. ಅಪರಾಧ ಕೃತ್ಯಕ್ಕೆ ಬಳಸಿದ್ದ ಕೆಲವೊಂದು ಡಿಜಿಟಲ್ ಸಾಧನಗಳು, ದಾಖಲೆಗಳನ್ನು ಈ ವೇಳೆ ವಶಕ್ಕೆ ಪಡೆಯಲಾಗಿದೆ’ ಎಂದು ಎನ್‌ಐಎ ಟ್ವೀಟ್‌ನಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.