ADVERTISEMENT

ಜನಸಂಖ್ಯಾ ಪಟ್ಟಿಗೂ ವಿರೋಧ

ಏಜೆನ್ಸೀಸ್
Published 25 ಡಿಸೆಂಬರ್ 2019, 3:55 IST
Last Updated 25 ಡಿಸೆಂಬರ್ 2019, 3:55 IST
   

ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್‌ಪಿಆರ್‌) ಪರಿಷ್ಕರಣೆಗೆ ₹3,941 ಕೋಟಿ ವೆಚ್ಚಕ್ಕೆ ಕೇಂದ್ರ ಸಂಪುಟವು ಮಂಗಳವಾರ ಒಪ್ಪಿಗೆ ಕೊಟ್ಟಿದೆ. ಆದರೆ, ಈಗ ಭಾರಿ ವಿವಾದಕ್ಕೆ ಕಾರಣವಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಮೊದಲ ಹಂತವಾಗಿ ಎನ್‌ಪಿಆರ್‌ ಮಾಡಲಾಗುತ್ತಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ‘ಎನ್‌ಆರ್‌ಸಿ ರಚನೆಯ ಮೊದಲ ಹೆಜ್ಜೆ’ ಎಂದು ಕೇಂದ್ರ ಗೃಹ ಸಚಿವಾಲಯವು ಸ್ಪಷ್ಟವಾಗಿ ಹೇಳಿದೆ. 2018–19ರ ವಾರ್ಷಿಕ ವರದಿಯಲ್ಲಿ ಈ ವಿಚಾರ ಇದೆ. ಎರಡು ತಿಂಗಳ ಹಿಂದೆ ಈ ವರದಿಯನ್ನು ಪ್ರಕಟಿಸಲಾಗಿದೆ. ಆದರೆ, ಎನ್‌ಪಿಆರ್‌ ಮತ್ತು ಎನ್‌ಆರ್‌ಸಿ ನಡುವೆ ಯಾವ ಸಂಬಂಧವೂ ಇಲ್ಲ ಎಂದು ಗೃಹ ಸಚಿವ ಅಮಿತ್‌ ಶಾ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

2014ರ ಜುಲೈ–ನವೆಂಬರ್‌ ನಡುವೆ ರಾಜ್ಯಸಭೆಯಲ್ಲಿ ನೀಡಲಾದ ಎರಡು ಉತ್ತರಗಳು ಮತ್ತು ಗೃಹ ಸಚಿವಾಲಯದ 2018–19ರ ವರದಿಯು ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ನಡುವೆ ಸಂಬಂಧ ಇದೆ ಎಂದೇ ಪ್ರತಿಪಾದಿಸುತ್ತವೆ.

ADVERTISEMENT

‘ಎನ್‌ಪಿಆರ್‌ ದತ್ತಾಂಶದ ಆಧಾರದಲ್ಲಿ ಎನ್‌ಆರ್‌ಸಿ ರೂಪಿಸಲು ಸರ್ಕಾರ ನಿರ್ಧರಿಸಿದೆ’ ಎಂದು ಗೃಹ ಖಾತೆಯ ರಾಜ್ಯ ಸಚಿವರಾಗಿದ್ದ ಕಿರಣ್‌ ರಿಜಿಜು ಅವರು 2014ರ ಜುಲೈ 23ರಂದು ರಾಜ್ಯಸಭೆಯಲ್ಲಿ ಹೇಳಿದ್ದರು. ‘ದೇಶದ ಸಾಮಾನ್ಯ ನಿವಾಸಿಗಳ ಪೌರತ್ವ ಸ್ಥಿತಿಯನ್ನು ಪರಿಶೀಲಿಸಿ ಎನ್‌ಆರ್‌ಸಿ ಸಿದ್ಧಪಡಿಸಲಾಗುವುದು’ ಎಂದು ಅವರು2014ರ ನವೆಂಬರ್‌ 26ರಂದುರಾಜ್ಯಸಭೆಯಲ್ಲಿ ಹೇಳಿದ್ದರು. ಆದರೆ, ‘ಇದನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತೇನೆ’ ಎಂದು ಜಾವಡೇಕರ್‌ ಮಂಗಳವಾರ ಹೇಳಿದ್ದಾರೆ. ‘2010ರಲ್ಲಿ ಯುಪಿಎ ಸರ್ಕಾರವು ಎನ್‌ಪಿಆರ್‌ ನಡೆಸಿತ್ತು. 2020ರಲ್ಲಿಯೂ ಅದೇ ಪ್ರಕ್ರಿಯೆ ನಡೆಯಲಿದೆ. ಆಗ ಇದನ್ನು ಎಲ್ಲರೂ ಸ್ವಾಗತಿಸಿದ್ದರು. ಆ ಪ್ರಕ್ರಿಯೆಯನ್ನು ಈಗ ಜಾರಿಗೆ ತರಲಾಗುತ್ತಿದೆ‘ ಎಂದು ಹೇಳಿದ್ದಾರೆ.

ಎನ್‌ಪಿಆರ್

* ಎನ್‌ಪಿಆರ್‌ಗೆ ಏನೇನು ಮಾಹಿತಿ ಕೊಡಬೇಕು?

ದೇಶದ ಸಾಮಾನ್ಯ ನಿವಾಸಿಗಳು ಈ ಕೆಳಗಿನ ಮಾಹಿತಿಗಳನ್ನು ನೀಡಬೇಕಾಗುತ್ತದೆ.ಹೆಸರು, ಕುಟುಂಬದ ಯಜಮಾನನ ಜೊತೆ ಸಂಬಂಧ, ತಂದೆಯ ಹೆಸರು, ತಾಯಿಯ ಹೆಸರು, ಮದುವೆಯಾಗಿದ್ದರೆ ಪತಿ/ಪತ್ನಿಯ ಹೆಸರು, ಲಿಂಗ, ಜನ್ಮ ದಿನಾಂಕ, ವಿವಾಹಿತರೇ/ಅವಿವಾಹಿತರೇ, ಜನ್ಮ ಸ್ಥಳ, ರಾಷ್ಟ್ರೀಯತೆ, ಹಾಲಿ ವಿಳಾಸ, ಹಾಲಿ ವಿಳಾಸದಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದೀರಿ, ವೃತ್ತಿ ಮತ್ತು ವಿದ್ಯಾರ್ಹತೆ.

* ದಾಖಲೆ ನೀಡಬೇಕೇ?

ಮಾಹಿತಿ ಸಂಗ್ರಹಿಸಲು ಮನೆಗೆ ಬರುವವರು ನಿವಾಸಿಗಳಿಂದ ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ‘ನಮಗೆ ಜನರ ಮೇಲೆ ವಿಶ್ವಾಸವಿದೆ, ಅವರು ಸತ್ಯವನ್ನೇ ಹೇಳುತ್ತಾರೆ ಎಂಬ ವಿಶ್ವಾಸವಿದೆ. ಆದ್ದರಿಂದ ಯಾವುದೇ ದಾಖಲೆಯನ್ನಾಗಲಿ ಬಯೊಮೆಟ್ರಿಕ್‌ ಆಗಲಿ ನೀಡುವ ಅಗತ್ಯವಿಲ್ಲ’ ಎಂದು ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

* ಯಾವ್ಯಾವ ರಾಜ್ಯಗಳಲ್ಲಿ ತಡೆ?

ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ವಿರೋಧಿಸಿ ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿರುವುದನ್ನು ಮುಂದಿಟ್ಟುಕೊಂಡು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಎನ್‌ಪಿಆರ್‌ ಸಿದ್ಧತೆಯನ್ನು ಸ್ಥಗಿತಗೊಳಿಸಿದ್ದಾರೆ. ಸಿಎಎ ಮತ್ತು ಎನ್‌ಆರ್‌ಸಿ ಬಗ್ಗೆ ಅಂತಿಮ ತೀರ್ಮಾನವಾಗದ ಹೊರತು ಎನ್‌ಪಿಆರ್‌ ನಡೆಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಕೇರಳ ಹಾಗೂ ರಾಜಸ್ಥಾನವೂ ಪಶ್ಚಿಮ ಬಂಗಾಳದ ಹಾದಿಯನ್ನೇ ತುಳಿದಿವೆ.

ಆದರೆ ಇದನ್ನು ಸಚಿವ ಜಾವಡೇಕರ್‌ ನಿರಾಕರಿಸಿದ್ದಾರೆ. ‘ಎಲ್ಲಾ ರಾಜ್ಯಗಳೂ ಎನ್‌ಪಿಆರ್‌ ಜಾರಿಗೆ ಕ್ರಮ ಕೈಗೊಂಡಿವೆ’ ಎಂದು ಅವರು ಹೇಳಿದ್ದಾರೆ.

* ಮಾಹಿತಿ ಎಲ್ಲರಿಗೂ ಲಭ್ಯವೇ?

ಎನ್‌ಪಿಆರ್‌ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದಿಲ್ಲ. ಸರ್ಕಾರದ ಇಲಾಖೆಗಳ ಅಧಿಕೃತ ಬಳಕೆದಾರರಿಗೆ ಪಾಸ್‌ವರ್ಡ್‌ ನೀಡಲಾಗುವುದು. ಆ ಮೂಲಕ ಅವರು ಮಾತ್ರಎನ್‌ಪಿಆರ್‌ ಮಾಹಿತಿಯನ್ನು ಪಡೆಯಬಹುದು.

ಜನಗಣತಿ

ಜನಸಂಖ್ಯಾ ನೋಂದಣಿ ಮತ್ತು ಜನಗಣತಿ ಜೊತೆಯಲ್ಲೇ ನಡೆಯಲಿದೆ. ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯ ಮೂಲಕ ದೇಶದ ಜನರಿಗೆ ಸಂಬಂಧಿಸಿದ ಹತ್ತಾರು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ.

ಎರಡು ಹಂತದ ಗಣತಿ

2021ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. 2020ರ ಏಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ ನಡೆಯುವ ಮೊದಲ ಹಂತದಲ್ಲಿ ಮನೆಗಣತಿ ನಡೆದರೆ, 2021ರ ಫೆಬ್ರುವರಿ 9ರಿಂದ 28ರವರೆಗಿನ ಅವಧಿಯಲ್ಲಿ ಜನಗಣತಿ ನಡೆಯುವುದು. 2021ರ ಮಾರ್ಚ್‌ 1ರ ನಂತರ ಈ ಅಂಕಿ ಅಂಶಗಳೇ ಬಳಕೆಯಾಗಲಿವೆ.

ಹಿಮಪಾತ ನಡೆಯುವ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಜಾರ್ಖಂಡ್‌ನಲ್ಲಿ 2020ರ ಅಕ್ಟೋಬರ್‌ 1ರಿಂದ ಹೊಸ ಅಂಕಿಅಂಶಗಳ ಉಲ್ಲೇಖವಾಗಲಿದೆ.

* ಯಾಕೆ ಜನಗಣತಿ?

ಒಂದು ದಶಕದಲ್ಲಿ ದೇಶವು ದಾಖಲಿಸಿರುವ ಅಭಿವೃದ್ಧಿಯ ಪ್ರಮಾಣವನ್ನು ಅಳೆಯಲು, ಪ್ರಸಕ್ತ ಜಾರಿಯಲ್ಲಿರುವ ಸರ್ಕಾರಿ ಯೋಜನೆಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದನ್ನು ತಿಳಿಯಲು ಹಾಗೂ ಮುಂದಿನ ಯೋಜನೆಗಳನ್ನು ರೂಪಿಸಲು ಈ ಅಂಕಿ ಅಂಶಗಳು ಮುಖ್ಯವಾಗುತ್ತವೆ.

* ಯಾವ್ಯಾವ ಮಾಹಿತಿ ಸಂಗ್ರಹ?

ಜನಗಣತಿಯ ಮೂಲಕ ದೇಶದ ಜನಸಂಖ್ಯೆ, ಆರ್ಥಿಕ ಚಟುವಟಿಕೆ, ಜನರ ವಿದ್ಯಾರ್ಹತೆ, ಮನೆ ಮತ್ತು ಮನೆಗಳಲ್ಲಿರುವ ಸೌಲಭ್ಯ, ನಗರೀಕರಣ, ಜನನ–ಮರಣ ಪ್ರಮಾಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ, ಭಾಷೆ, ಧರ್ಮ, ವಲಸೆ ಪ್ರಮಾಣ, ಅಂಗವೈಕಲ್ಯ ಮುಂತಾದ ಅನೇಕ ಮಾಹಿತಿಗಳನ್ನು ನಿಖರವಾಗಿ ಸಂಗ್ರಹಿಸಲಾಗುತ್ತದೆ.

ಕೃಷಿಕರು, ಕೃಷಿ ಕಾರ್ಮಿಕರು, ಅವರ ಲಿಂಗ, ಗೃಹೇತರ ಉದ್ಯಮಗಳಲ್ಲಿ ವೃತ್ತಿನಿರತರ ವರ್ಗೀಕರಣ, ಸಾಕ್ಷರತೆಯ ಪ್ರಮಾಣ, ಒಟ್ಟಾರೆ ಮನೆಗಳು, ಪಟ್ಟಣ– ಕೊಳೆಗೇರಿಗಳ ಸಂಖ್ಯೆ ಹಾಗೂ ಅವುಗಳ ಜನಸಂಖ್ಯೆ, ಕುಡಿಯುವ ನೀರಿನ ಲಭ್ಯತೆ, ವಿದ್ಯುತ್‌ ಸೌಲಭ್ಯ, ಕೃಷಿ ಪದ್ಧತಿ, ಮನೆಯು ಕಚ್ಚಾ ಮನೆಯೋ ಪಕ್ಕಾ ಮನೆಯೋ... ಹೀಗೆ ಹತ್ತಾರು ಮಾಹಿತಿಗಳನ್ನು
ಸಂಗ್ರಹಿಸಲಾಗುತ್ತದೆ.

* ಯಾವಾಗ ಆರಂಭ?

ಭಾರತದಲ್ಲಿ 1872ರಲ್ಲಿ ಮೊದಲ ಬಾರಿಗೆ ಜನಗಣತಿ ನಡೆದಿತ್ತು. ಆಗ ಏಕಕಾಲಕ್ಕೆ ಎಲ್ಲಾ ಕಡೆ ಗಣತಿ
ನಡೆದಿರಲಿಲ್ಲ. ಬದಲಿಗೆ ಹಂತಹಂತವಾಗಿ ನಡೆಸಲಾಗಿತ್ತು.

1949ರಲ್ಲಿ ಭಾರತ ಸರ್ಕಾರವು, ದೇಶದ ಜನಸಂಖ್ಯೆ, ಅದರ ವೃದ್ಧಿದರ ಮುಂತಾದ ಸಮಗ್ರ ಮಾಹಿತಿಯನ್ನು ವ್ಯವಸ್ಥಿತ ರೂಪದಲ್ಲಿ ಸಂಗ್ರಹಿಸಲು ತೀರ್ಮಾನಿಸಿ, ಗೃಹ ಸಚಿವಾಲಯದಡಿ ಪ್ರತ್ಯೇಕ ಸಂಸ್ಥೆಯನ್ನು ಹುಟ್ಟುಹಾಕಿತು.

1969ರಲ್ಲಿ ದೇಶದ ಜನನ ಮರಣ– ನೋಂದಣಿಯ ಜವಾಬ್ದಾರಿಯನ್ನೂ ಆ ಸಂಸ್ಥೆಗೆ ನೀಡಲಾಯಿತು.

ಸಂಬಂಧವೇ ಇಲ್ಲ : ಜಾವಡೇಕರ್

‘ಎನ್‌ಪಿಆರ್‌ ಮತ್ತು ಎನ್‌ಆರ್‌ಸಿ ನಡುವೆ ಯಾವ ಸಂಬಂಧವೂ ಇಲ್ಲ. ಎನ್‌ಪಿಆರ್‌ ಅನ್ನು ಎನ್‌ಆರ್‌ಸಿ ರಚಿಸಲು ಬಳಸಿಕೊಳ್ಳಲಾಗುವುದು ಎಂದು ನಾವು ಯಾವತ್ತೂ ಹೇಳಿಯೇ ಇಲ್ಲ’ ಎಂದು ಜಾವಡೇಕರ್‌ ಹೇಳಿದ್ದಾರೆ.

ಎನ್‌ಪಿಆರ್‌-ಎನ್‌ಆರ್‌ಸಿ : ಸಿಪಿಎಂ ಮುಖಂಡ ಸೀತಾರಾಂ ಯಚೂರಿ

‘ಎನ್‌ಪಿಆರ್‌ ಎಂದರೆ ಎನ್‌ಆರ್‌ಸಿ. ಮೋದಿ ಸರ್ಕಾರವು ಎಷ್ಟು ಸುಳ್ಳು ಹೇಳುತ್ತಿದೆ? ಎನ್‌ಆರ್‌ಸಿ ಕೆಲಸ ಆರಂಭಿಸಲು ಎನ್‌ಪಿಆರ್‌ನ ಮಾಹಿತಿಯನ್ನು ಬಳಸಿಕೊಳ್ಳಲಾಗುವುದು ಎಂದು ಈ ಸರ್ಕಾರವು ರಾಜ್ಯಸಭೆಯಲ್ಲಿ ಹೇಳಿತ್ತು. ಅದು ರಾಜ್ಯಸಭೆಯ ದಾಖಲೆಯಲ್ಲಿ ಇದೆ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.

ನಾಚಿಕೆಗೇಡು : ಕಾಂಗ್ರೆಸ್ ಮುಖಂಡ ಅಜಯ ಮಾಕನ್

‘ಮೋದಿ ಅವರೇ ಹೇಳುವಂತೆ ಎನ್‌ಆರ್‌ಸಿ ಬಗ್ಗೆ ಚರ್ಚೆಯೇ ಆಗಿಲ್ಲ. ಇಂದು, ಎನ್‌ಪಿಆರ್‌ ಮತ್ತು ಎನ್‌ಆರ್‌ಸಿ ನಡುವೆ ವಾರ್ತಾ ಮತ್ತು ಪ್ರಸಾರ ಸಚಿವರಿಗೆ ಯಾವ ಸಂಬಂಧವೂ ಕಾಣಿಸುತ್ತಿಲ್ಲ... ಕೇಂದ್ರ ಗೃಹ ಸಚಿವಾಲಯದ 2018–19ರ ವಾರ್ಷಿಕ ವರದಿ ನೋಡಿ. ಪುಟ 262. ಎನ್‌ಆರ್‌ಸಿ ರೂಪಿಸಲು ಮೊದಲ ಹೆಜ್ಜೆ ಎನ್‌ಪಿಆರ್‌ ಎಂಬುದು ಅದರಲ್ಲಿ ಇದೆ. ನಾಚಿಕೆಗೇಡು– ಪ್ರಧಾನಿ ಸುಳ್ಳು ಹೇಳಬಾರದು’ ಎಂದು ಕಾಂಗ್ರೆಸ್‌ ಮುಖಂಡ ಅಜಯ ಮಾಕನ್‌ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.