ಪುಣೆ: ಬಾಲಕ ಚಲಾಯಿಸುತ್ತಿದ್ದ ಪೋಶೆ ಕಾರು ಅಪಘಾತದ ಪ್ರಕರಣವನ್ನು ಎಐ ಉಪಕರಣ ಹಾಗೂ ಸಾಫ್ಟ್‌ವೇರ್‌ಗಳನ್ನು ಬಳಸಿ ‘ತಾಂತ್ರಿಕವಾಗಿ ಮರುಸೃಷ್ಟಿ’ ಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಪುರಾವೆಯನ್ನು ಇನ್ನಷ್ಟು ಬಲಗೊಳಿಸಲು ಇದು ಸಹಕಾರಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತ ಪ್ರಕರಣಗಳ ಮರುಸೃಷ್ಟಿಗೆ ಈವರೆಗೂ ಎಐ ತಂತ್ರಜ್ಞಾನ ಬಳಸಿಲ್ಲ. ಕೊಲೆ ಪ್ರಕರಣಗಳಲ್ಲಿ ದೇಹ ಪತ್ತೆಗೆ ಎಐ ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.
‘ಎಐ ಉಪಕರಣಗಳ ಮೂಲಕ ಇಡೀ ಪ್ರಕರಣವನ್ನು ಮರುಸೃಷ್ಟಿ ಮಾಡುವ ಗುರಿ ಹೊಂದಿದ್ದೇವೆ. ಸಾಕ್ಷ್ಯ ಬಲಪಡಿಸಲು ಅಪಘಾತದ ದೃಶ್ಯದ ಸಮಗ್ರ ದೃಶ್ಯವನ್ನು ರಚಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಾಪರಾಧಿಯ ಮನೆಯಿಂದ ಹೊರಟು ಮುಂಡ್ವಾ ಪ್ರದೇಶದ ಬ್ಲಾಕ್ ಕ್ಲಬ್‌ಗೆ ಮತ್ತು ಅಲ್ಲಿಂದ ಕಲ್ಯಾಣಿಯಲ್ಲಿ ಅಪಘಾತ ನಡೆದ ಸ್ಥಳಕ್ಕೆ ಬರುವುದನ್ನು ಮರುಸೃಷ್ಟಿ ಮಾಡಲು ಉದ್ದೇಶಿಸಲಾಗಿದೆ. ಸಿಟಿಟಿವಿ ದೃಶ್ಯಾವಳಿಗಳು, ಚಿತ್ರಗಳನ್ನು ಬಳಸಿ ಎಐ ಉಪಕರಣಗಳ ಮೂಲಕ 3ಡಿ ಚಿತ್ರ ಅಥವಾ 3ಡಿ ವಾಕ್‌ಥ್ರೂವನ್ನು ಸೃಜಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಾಪರಾಧಿ ಕಾರು ಚಲಾಯಿಸಿದ ಮಾರ್ಗಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದು, ತಾಂತ್ರಿಕ ಮರುಸೃಷ್ಟಿ ವೇಳೆ ಇದನ್ನು ಉಪಯೋಗಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.