ADVERTISEMENT

ಪೋಶೆ ಕಾರು ಅಪಘಾತ ಪ್ರಕರಣ: ಬಾಲಕನ ರಕ್ತದ ಬದಲಿಗೆ ಇರಿಸಿದ್ದು ಮಹಿಳೆಯೊಬ್ಬರ ರಕ್ತ

ಪಿಟಿಐ
Published 30 ಮೇ 2024, 15:25 IST
Last Updated 30 ಮೇ 2024, 15:25 IST
<div class="paragraphs"><p>ಪೋಶೆ ಕಾರು ಅಪಘಾತ </p></div>

ಪೋಶೆ ಕಾರು ಅಪಘಾತ

   

ಪಿಟಿಐ ಚಿತ್ರ

ಪುಣೆ: ಪೋಶೆ ಕಾರು ಅಪಘಾತದಲ್ಲಿ ಭಾಗಿಯಾದ 17 ವರ್ಷ ವಯಸ್ಸಿನ ಬಾಲಕನ ರಕ್ತದ ಮಾದರಿಯನ್ನು ಬದಲಿಸಿ, ಅದರ ಜಾಗದಲ್ಲಿ ಮಹಿಳೆಯೊಬ್ಬರ ರಕ್ತದ ಮಾದರಿಯನ್ನು ಇರಿಸಲಾಗಿತ್ತು ಎಂದು ಪೊಲೀಸರು ನ್ಯಾಯಾಲಯಕ್ಕೆ ಗುರುವಾರ ತಿಳಿಸಿದ್ದಾರೆ.

ADVERTISEMENT

ರಕ್ತದ ಮಾದರಿಯನ್ನು ಈ ರೀತಿ ಬದಲಾಯಿಸಿ, ಬಾಲಕ ಕಾರು ಚಾಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಮದ್ಯ ಸೇವಿಸಿರಲಿಲ್ಲ ಎಂದು ತೋರಿಸುವ ಯತ್ನ ನಡೆಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಸಸ್ಸೂನ್ ಆಸ್ಪತ್ರೆಯ ಇಬ್ಬರು ವೈದ್ಯರು ಹಾಗೂ ಒಬ್ಬ ನೌಕರನ ಪೊಲೀಸ್ ಕಸ್ಟಡಿಯ ಅವಧಿಯನ್ನು ಜೂನ್‌ 5ರವರೆಗೆ ವಿಸ್ತರಿಸಿ ಸೆಷನ್ಸ್‌ ನ್ಯಾಯಾಲಯವು ಆದೇಶಿಸಿದೆ.

ಬಾಲಕನ ರಕ್ತದ ಮಾದರಿಯ ಬದಲಿಗೆ ಇರಿಸಿದ್ದ ರಕ್ತದ ಮಾದರಿಯು ಯಾವ ಮಹಿಳೆಯದ್ದು ಎಂಬುದನ್ನು ಗುರುತಿಸಬೇಕಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಸರ್ಕಾರದ ಮೂಲವೊಂದರ ಪ್ರಕಾರ, ಅದು ಬಾಲಕನ ತಾಯಿಯ ರಕ್ತದ ಮಾದರಿ.

ರಕ್ತದ ಮಾದರಿಯನ್ನು ಬದಲಾಯಿಸಿರುವುದು ಬೆಳಕಿಗೆ ಬಂದ ನಂತರದಲ್ಲಿ ಆಸ್ಪತ್ರೆಯ ವಿಧಿವಿಜ್ಞಾನ ಔಷಧಗಳ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಅಜಯ್ ತವಾರೆ, ವೈದ್ಯಕೀಯ ಅಧಿಕಾರಿ ಡಾ. ಶ್ರೀಹರಿ ಹಲ್ನೋರ್ ಮತ್ತು ಆಸ್ಪತ್ರೆಯ ನೌಕರ ಅತುಲ್ ಘಟಕಾಂಬ್ಳೆ ಅವರನ್ನು ಬಂಧಿಸಲಾಯಿತು. ಈ ಮೂವರ ಪೊಲೀಸ್ ಕಸ್ಟಡಿ ಅವಧಿ ಕೊನೆಗೊಂಡ ಕಾರಣ, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಬಾಲಕನ ರಕ್ತದ ಮಾದರಿಯನ್ನು ಡಾ. ಹಲ್ನೋರ್‌ ಎಸೆಯಲಿಲ್ಲ. ಬದಲಿಗೆ, ಅದನ್ನು ಅವರು ಬೇರೊಬ್ಬರಿಗೆ ನೀಡಿದ್ದಾರೆ. ಆ ಮಾದರಿಯನ್ನು ವಶಪಡಿಸಿಕೊಳ್ಳಬೇಕಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.