ADVERTISEMENT

ಪೋಶೆ ಕಾರು ಅಪಘಾತ: ಬಾಲಕನಿಗೆ ನೀಡಿದ ಜಾಮೀನು ಪ್ರಕ್ರಿಯೆಯಲ್ಲಿ ಲೋಪಗಳು

ಪಿಟಿಐ
Published 15 ಜೂನ್ 2024, 19:52 IST
Last Updated 15 ಜೂನ್ 2024, 19:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣೆ: ‘ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನಿಗೆ ಬಾಲನ್ಯಾಯ ಮಂಡಳಿಯು (ಜೆಜೆಬಿ) ಜಾಮೀನು ಮಂಜೂರು ಮಾಡಿದ ಪ್ರಕ್ರಿಯೆಯಲ್ಲಿ ಹಲವು ಲೋಪಗಳಿವೆ ಎಂದು ತನಿಖೆಗೆ ರಚಿಸಲಾಗಿದ್ದ ಸಮಿತಿಯು ಪತ್ತೆ ಮಾಡಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. 

ಈ ಪ್ರಕರಣದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿ 300 ಪದಗಳ ಪ್ರಬಂಧ ಬರೆಯಲು ಸೇರಿದಂತೆ ಇನ್ನಿತರ ಕಠಿಣವಲ್ಲದ ನಿಯಮಗಳೊಂದಿಗೆ ಕಾನೂನು ಸಂಘರ್ಷಕ್ಕೆ ಸಿಲುಕಿದ ಬಾಲಕನಿಗೆ ಜೆಜೆಬಿಯು ಜಾಮೀನು ಮಂಜೂರು ಮಾಡಿತ್ತು. ಈ ಕ್ರಮವು ರಾಷ್ಟ್ರಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು. ಈ ಕುರಿತು ತನಿಖೆಗೆ ರಚಿಸಲಾಗಿದ್ದ ಐವರು ಸದಸ್ಯರ ಸಮಿತಿಯು ತನ್ನ ವರದಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಯುಕ್ತರಿಗೆ ಶುಕ್ರವಾರ ಸಲ್ಲಿಸಿದೆ. 

ಈ ವರದಿಯಲ್ಲಿ ‘ಏಕ ಸದಸ್ಯರಿದ್ದ ಜೆಜೆಬಿಯು ಅಪಘಾತ ಸಂಭವಿಸಿದ ದಿನವಾದ ಮೇ 19ರಂದೇ ಬಾಲಕನಿಗೆ ಜಾಮೀನು ನೀಡಿತ್ತು. ಜಾಮೀನಿನ ಆದೇಶಕ್ಕೆ ಮಾರನೇ ದಿನ ಮತ್ತೊಬ್ಬ ಸದಸ್ಯರು ಸಮ್ಮತಿ ಸೂಚಿಸಿದ್ದಾರೆ. ಇದು ತಪ್ಪು. ಈ ಮೂಲಕ ಜೆಜೆಬಿಯ ಸದಸ್ಯರು ನಿಯಮಗಳನ್ನು ಪಾಲಿಸದೆ ಇರುವುದು ಕಂಡುಬಂದಿದೆ’ ಎಂದು ತಿಳಿಸಲಾಗಿದೆ. 

ADVERTISEMENT

ಈ ವರದಿ ಆಧರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು, ಜೆಜೆಬಿಯ ಇಬ್ಬರು ಸದಸ್ಯರಿಗೆ ನೋಟಿಸ್ ನೀಡಿದೆ ಎಂದು  ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.