ಪುಣೆ: ಇಬ್ಬರ ಸಾವಿಗೆ ಕಾರಣವಾದ ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಬಾಲಕನಿಗೆ ಜಾಮೀನು ಮಂಜೂರು ಮಾಡುವ ವಿಚಾರದಲ್ಲಿ ಬಾಲ ನ್ಯಾಯಮಂಡಳಿಯ (ಜೆಜೆಬಿ) ಇಬ್ಬರು ಸದಸ್ಯರು ಕಾರ್ಯವಿಧಾನಗಳಲ್ಲಿ ಲೋಪ ಎಸಗಿದ್ದಾರೆ ಎಂದು ತನಿಖಾ ಸಮಿತಿ ಬುಧವಾರ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಈ ಇಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಆರೋಪಿಗೆ ಜಾಮೀನು ಮಂಜೂರು ಮಾಡುವಾಗ ಜೆಜೆಬಿ ಸದಸ್ಯರು ಕಾರ್ಯವಿಧಾನಗಳ ಲೋಪ ಎಸಗಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ, ತಪ್ಪು ಮಾಡಿದ್ದಾರೆ. ತನಿಖೆಯ ಭಾಗವಾಗಿ ಜೆಜೆಬಿ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
‘ಜೆಜೆಬಿಯ ಇಬ್ಬರು ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ. ಈ ವರದಿ ಮೇರೆಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಜೆಜೆಬಿಯ ಇಬ್ಬರು ಸದಸ್ಯರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೆ, ಅವರು ನೀಡಿದ ಉತ್ತರಗಳು ತೃಪ್ತಿಕರವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಇಬ್ಬರೂ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ 19ರಂದು ಪುಣೆಯ ಕಲ್ಯಾಣಿ ನಗರದ ಬಳಿ ಪಾನಮತ್ತ ಬಾಲಕ ಚಲಾಯಿಸುತ್ತಿದ್ದ ಪೋಶೆ ಕಾರು ಡಿಕ್ಕಿ ಹೊಡೆದು, ಇಬ್ಬರು ಟೆಕಿಗಳು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.