ಪುಣೆ: ಪೋಶೆ ಕಾರು ದುರಂತ ಪ್ರಕರಣದಲ್ಲಿ ಚಾಲಕನನ್ನು ಅಪಹರಿಸಿದ ಆರೋಪದಡಿ ಪ್ರಕರಣದ ಆರೋಪಿಯೂ ಆಗಿರುವ ಬಾಲಕನ ತಂದೆ ಹಾಗೂ ಅಜ್ಜನಿಗೆ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಜಾಮೀನು ಮಂಜೂರು ಮಾಡಿದ್ದಾರೆ.
ಕಳೆದ ಮೇನಲ್ಲಿ ಸಂಭವಿಸಿದ ಪೋಶೆ ಕಾರು ಅಪಘಾತದಲ್ಲಿ ವೇಗವಾಗಿ ನುಗ್ಗಿದ ಪೋಶೆ ಕಾರು ಬೈಕ್‌ಗೆ ಡಿಕ್ಕಿಪಡಿಸಿ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದರು. ಕಾರನ್ನು ಪಾನಮತ್ತನಾಗಿದ್ದ ಬಾಲಕ ಓಡಿಸುತ್ತಿದ್ದ ಎಂಬ ಕಾರಣದಿಂದ ಇದು ದೇಶವ್ಯಾಪಿ ಸುದ್ದಿಯಾಗಿತ್ತು.
ಈ ಪ್ರಕರಣದಲ್ಲಿ ಕಾರನ್ನು ತಾನೇ ಚಾಲನೆ ಮಾಡುತ್ತಿದ್ದೆ ಎಂದು ತನ್ನ ಮೇಲೆ ಆರೋಪ ಹೊತ್ತುಕೊಳ್ಳುವಂತೆ ಮನೆಯ ಕಾರು ಚಾಲಕನ ಮೇಲೆ ಒತ್ತಡ ಹೇರಿದ್ದೂ ಸುದ್ದಿಯಾಗಿತ್ತು. ಈ ಕುರಿತು ಚಾಲಕ ಮೇ 19ರಂದು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಅದೇ ದಿನ ಬೆಳಿಗ್ಗೆ 11ಕ್ಕೆ ಬಾಲಕನ ತಂದೆ ವಿಶಾಲ್ ಅಗರವಾಲ್ ಹಾಗೂ ಅವರ ತಂದೆ ಅವರು ಚಾಲಕನನ್ನು ಅಪರಿಸಿದ್ದರು ಎಂದು ಆರೋಪಿಸಲಾಗಿತ್ತು.
ಬಾಲಕನಿಗೆ ಕಾರು ನೀಡಿದ ಆರೋಪಡಿ ಬಂಧಿತರಾಗಿದ್ದ ವಿಶಾಲ್ ಹಾಗೂ ಅವರ ತಂದೆಗೆ ಬಾಲಾಪರಾಧಿ ನ್ಯಾಯಾಲವು ಜಾಮೀನು ನೀಡಿತ್ತು. ಆದರೆ ಅಪಹರಣ ಪ್ರಕರಣದಲ್ಲಿ ಇವರು ಬಂಧಿತರಾಗಿದ್ದರು.
ತನ್ನ ಕಕ್ಷೀದಾರರು ತನಿಖೆಗೆ ಸಹಕರಿಸಲಿದ್ದು, ಕಠಿಣ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಆರೋಪಿಗಳ ಪರ ವಕೀಲರು ನ್ಯಾಯಾಲಯವನ್ನು ಕೋರಿದರು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.