ಪುಣೆ: ಇಬ್ಬರ ಸಾವಿಗೆ ಕಾರಣವಾದ ಪುಣೆಯ ಪೋಷೆ ಕಾರು ದುರಂತದಲ್ಲಿ ಆರೋಪಿಯಾಗಿರುವ ಬಾಲಕನಿಗೆ ಜಾಮೀನು ಮಂಜೂರು ಮಾಡಿದ್ದ ಬಾಲಾಪರಾಧ ನ್ಯಾಯಮಂಡಳಿ ಸದಸ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ತನಿಖಾ ಸಂಸ್ಥೆ ಶಿಫಾರಸು ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಲ್ಯಾಣಿ ನಗರ ಪ್ರದೇಶದಲ್ಲಿ ಮೇ 19ರಂದು ಸಂಭವಿಸಿದ ಅಪಘಾತದಲ್ಲಿ ವೇಗವಾಗಿ ನುಗ್ಗಿದ ಪೋಷೆ ಕಾರು ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಐಟಿ ಉದ್ಯೋಗಿಗಳಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಇಬ್ಬರು ಮೃತಪಟ್ಟಿದ್ದರು.
ಈ ಪ್ರಕರಣದಲ್ಲಿ ಬಾಲಕ ಕಾರು ಚಾಲನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿತ್ತು. ವಿಚಾರಣೆ ನಡೆಸಿದ ಬಾಲಾಪರಾಧ ನ್ಯಾಯಮಂಡಳಿಯ ಸದಸ್ಯ ಎಲ್.ಎನ್. ದನ್ವಾಡೆ ಅವರು ಬಾಲಕನಿಗೆ ಜಾಮೀನು ಮಂಜೂರು ಮಾಡಿದ್ದರು. 300 ಪದದ ನಿಬಂಧನೆ ಬರೆಯುವ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು.
ಜಾಮೀನು ನೀಡಿದ ನ್ಯಾಯಮಂಡಳಿಯ ಸದಸ್ಯರ ವಿರುದ್ಧ ತನಿಖೆ ನಡೆಸುವ ಹೊಣೆಯನ್ನು ಮಹಾರಾಷ್ಟ್ರ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸಿತ್ತು. ತನಿಖೆ ನಡೆಸಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಜಾಮೀನು ಮಂಜೂರು ಮಾಡುವಾಗ ಕಾರ್ಯವಿಧಾನದ ಲೋಪ, ನಿಯಮಗಳ ಅನುಸರಣೆಯಲ್ಲಿ ಲೋಪ ಆಗಿದೆ ಎಂದು ಹೇಳಲಾಗಿದೆ. ಈ ಕುರಿತು ನ್ಯಾಯಮಂಡಳಿಯ ಇಬ್ಬರು ಸದಸ್ಯರ ಹೇಳಿಕೆಯನ್ನೂ ದಾಖಲಿಸಲಾಗಿದೆ.
ಈ ವರದಿ ಆಧರಿಸಿ ಸರ್ಕಾರವು ನ್ಯಾಯಮಂಡಳಿಯ ಸದಸ್ಯರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಅವರ ಉತ್ತರ ತೃಪ್ತಿಕರವಾಗಿರಲಿಲ್ಲ. ಹೀಗಾಗಿ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.