ರಾಮ್‌ಪುರ: ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್ ಮಾಲೀಕತ್ವದ ಶಾಲೆಯನ್ನು ಸರ್ಕಾರ ವಶಕ್ಕೆ ಪಡೆದ ನಂತರ ಸಂಪುಟ ಸಭೆಯ ನಿರ್ಣಯದಂತೆ, ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಆಜಂ ಖಾನ್ ಅವರ ಟ್ರಸ್ಟ್ ರಾಮ್‌ಪುರ ಪಬ್ಲಿಕ್ ಶಾಲೆಯನ್ನು ನಡೆಸುತ್ತಿತ್ತು. ಮಹಮ್ಮದ್ ಅಲಿ ಜೌಹಾರ್ ಟ್ರಸ್ಟ್‌ಗೆ ಗುತ್ತಿಗೆ ಆಧಾರದಲ್ಲಿ ನೀಡಿದ್ದ 41,000 ಚದರಡಿ ಜಾಗದಲ್ಲಿ ಸರ್ಕಾರಿ ಆದೇಶ ಉಲ್ಲಂಘನೆಯಾಗಿದೆ ಎಂದು ರಾಜ್ಯ ಸರ್ಕಾರ ಅದನ್ನು ಹಿಂಪಡೆಯಲು ಅ. 31ರಂದು ನಿರ್ಧರಿಸಿತ್ತು. ಈ ಸಂಬಂಧ ಕಟ್ಟಡವನ್ನು ಕೂಡಲೇ ತೆರವುಗೊಳಿಸುವಂತೆ ನ. 2ರಂದು ಆದೇಶಿಸಿತ್ತು.
ರಾಮ್‌ಪುರ ಕೋಟೆ ಬಳಿ ಇರುವ ಮುರ್ತಝಾ ಹಳೆಯ ಶಾಲಾ ಕಟ್ಟಡದಲ್ಲಿ ಮೊದಲು ಜಿಲ್ಲಾ ಶಾಲಾ ನಿರೀಕ್ಷಕರ ಕಚೇರಿ ಇತ್ತು. ರಾಜ್ಯದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ, ಖಾನ್ ಅವರು ಮಂತ್ರಿ ಆಗಿದ್ದರು. ಆ ಅವಧಿಯಲ್ಲಿ ಈ ಜಾಗವನ್ನು ವಾರ್ಷಿಕ ಭೂಬಾಡಿಗೆ ₹100ರಂತೆ ಮಹಮ್ಮದ್ ಅಲಿ ಜೌಹಾರ್ ಟ್ರಸ್ಟ್‌ಗೆ ನೀಡಲಾಗಿತ್ತು.
ಮೌಲಾನಾ ಮಹಮ್ಮದ್ ಅಲಿ ಜೌಹಾರ್ ಟ್ರಸ್ಟ್ ಅಡಿಯಲ್ಲಿ ಅದೇ ಹೆಸರಿನ ವಿಶ್ವವಿದ್ಯಾಲಯವನ್ನೂ ಈ ಜಾಗದಲ್ಲೇ ಆರಂಭಿಸಲಾಗಿತ್ತು. ಸದ್ಯ ಜೈಲಿನಲ್ಲಿರುವ ಆಜಂ ಖಾನ್ ಅವರು ಸಂಸ್ಥಾಪಕ ಕುಲಾಧಿಪತಿಯಾಗಿದ್ದರು. 2012ರಲ್ಲಿ ಈ ವಿಶ್ವವಿದ್ಯಾಲಯವನ್ನು ಅಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಲೋಕಾರ್ಪಣೆಗೊಳಿಸಿದ್ದರು.
ಈ ಶಾಲೆಯ ಪಕ್ಕದಲ್ಲೇ ಖಾನ್ ಅವರ ಕಚೇರಿ ಇತ್ತು. ಸಮಾಜವಾದಿ ಪಕ್ಷದ ರಾಮ್‌ಪುರ ಘಟಕದ ಪಕ್ಷದ ಕಾರ್ಯಗಳು ಇದೇ ಕಟ್ಟಡದಲ್ಲಿ ನಡೆಯುತ್ತಿತ್ತು. ಇಲ್ಲಿ ಶಾಲೆಗಾಗಿ ಎರಡು ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಅವುಗಳನ್ನೂ ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ 30 ವರ್ಷಗಳ ಗುತ್ತಿಗೆ ಕೊನೆಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವರ ನೇತೃತ್ವದಲ್ಲಿ ಜಾಗವನ್ನು ವಶಕ್ಕೆ ಪಡೆಯಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ರಾಮ್‌ಪುರ ನಗರ ಘಟಕದ ಅಧ್ಯಕ್ಷ ಆಸೀಮ್ ರಾಜಾ ಪ್ರತಿಭಟನೆ ನಡೆಸಿದರು. ಶಾಲೆಗೆ ನೀಡಿದ ಜಾಗದಿಂದ ಪಕ್ಷದ ಕಚೇರಿ ಪ್ರತ್ಯೇಕವಾಗಿದೆ. ಹೀಗಾಗಿ ಅದನ್ನು ವಶಕ್ಕೆ ಪಡೆಯಬಾರದು ಎಂದು ಆಗ್ರಹಿಸಿದರು. ಆದರೆ ಪಕ್ಷದ ಕಚೇರಿಯೂ ಗುತ್ತಿಗೆ ನೀಡಿದ ಜಾಗದಲ್ಲೇ ಇದೆ ಎಂದು ಅಧಿಕಾರಿಗಳು ತಿಳಿಸಿ, ಜಾಗವನ್ನು ವಶಕ್ಕೆ ಪಡೆದರು.
ನಕಲಿ ಜನನ ಪ್ರಮಾಣಪತ್ರ ಸೃಷ್ಟಿಸಿದ ಪ್ರಕರಣದಲ್ಲಿ 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಆಜಂ ಖಾನ್ ಮತ್ತು ಅವರ ಪತ್ನಿ ತನ್ಜೀನ್ ಫಾತಿಮಾ ಹಾಗೂ ಪುತ್ರ ಅಬ್ದುಲ್ ಆಜಂ ಸದ್ಯ ಜೈಲಿನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.