ADVERTISEMENT

UPSC ಆಕಾಂಕ್ಷಿಗಳ ಸಾವು: ನೆಲಮಾಳಿಗೆಯಲ್ಲಿ ತರಗತಿಗಳ ತಪಾಸಣೆಗೆ ಮುಂದಾದ MP ಸರ್ಕಾರ

ಪಿಟಿಐ
Published 29 ಜುಲೈ 2024, 13:30 IST
Last Updated 29 ಜುಲೈ 2024, 13:30 IST
<div class="paragraphs"><p>ದೆಹಲಿಯ ಓಲ್ಡ್ ರಾಜೇಂದ್ರ ನಗರದಲ್ಲಿರುವ ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್‌ ಎದುರು ಆಕಾಂಕ್ಷಿಗಳು ಫಲಕ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು</p></div>

ದೆಹಲಿಯ ಓಲ್ಡ್ ರಾಜೇಂದ್ರ ನಗರದಲ್ಲಿರುವ ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್‌ ಎದುರು ಆಕಾಂಕ್ಷಿಗಳು ಫಲಕ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು

   

ಪಿಟಿಐ ಚಿತ್ರ

ಭೋಪಾಲ್: ನಾಗರಿಕ ಸೇವಾ ಪರೀಕ್ಷೆ ಸಿದ್ಧತೆಗೆ ದೆಹಲಿಯಲ್ಲಿ ತರಬೇತಿ ನೀಡುವ ಕೋಚಿಂಗ್ ಕೇಂದ್ರದೊಳಗೆ ನೀರು ನುಗ್ಗಿ ಮೂವರ ಸಾವಿಗೆ ಕಾರಣವಾದ ಪ್ರಕರಣದ ನಂತರ, ನೆಲ ಮಾಳಿಗೆಯಲ್ಲಿ ನಡೆಸಲಾಗುತ್ತಿರುವ ಕೋಚಿಂಗ್ ಕೇಂದ್ರಗಳಲ್ಲಿನ ಸುರಕ್ಷತೆಯನ್ನು ಪರಿಶೀಲಿಸುವಂತೆ ಮಧ್ಯಪ್ರದೇಶ ಸರ್ಕಾರ ಸೋಮವಾರ ಆದೇಶಿಸಿದೆ.

ADVERTISEMENT

ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವೆಗಳ ಪರೀಕ್ಷೆಗೆ ದೆಹಲಿಯ ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್‌ನಲ್ಲಿ ಸಿದ್ಧತೆ ನಡೆಸುತ್ತಿದ್ದ ಉತ್ತರ ಪ್ರದೇಶದ ಶ್ರೇಯಸ್ ಯಾದವ್, ತೆಲಂಗಾಣದ ತಾನ್ಯಾ ಸೋನಿ ಹಾಗೂ ಕೇರಳದ ನವೀನ್ ದಲ್ವಾನಿ ಅವರು ಪ್ರವಾಹ ನೀರಿನಲ್ಲಿ ಸಿಲುಕಿದ ಪರಿಣಾಮ ಮೃತಪಟ್ಟಿದ್ದಾರೆ. ಅತಿಯಾದ ಮಳೆಯಿಂದಾಗಿ ಸೃಷ್ಟಿಯಾದ ಪ್ರವಾಹ, ಕೋಚಿಂಗ್ ಕೇಂದ್ರದ ನೆಲಮಾಳಿಗೆಯಲ್ಲಿದ್ದ ಗ್ರಂಥಾಲಯಕ್ಕೆ ನುಗ್ಗಿತ್ತು. ಇದರಲ್ಲಿ ಸಿಲುಕಿದ ಈ ಮೂವರು ಹೊರಬರಲಾಗದೆ ಮೃತಪಟ್ಟರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ಈ ಘಟನೆ ಸಂಬಂಧ ಕೋಚಿಂಗ್ ಕೇಂದ್ರದ ಮಾಲೀಕ ಹಾಗೂ ಸಂಯೋಜಕರನ್ನೂ ಒಳಗೊಂಡು ಏಳು ಜನರನ್ನು ಬಂಧಿಸಲಾಗಿದೆ. ಈ ಘಟನೆ ಬೆನ್ನಲ್ಲೇ ಅಧಿಕಾರಿಗಳ ಸಭೆ ನಡೆಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ್ ಅವರು, ನೆಲ ಮಾಳಿಗೆಯಲ್ಲಿ ಕಾರ್ಯನಿರ್ವಹಿಸುವ ಕೋಚಿಂಗ್ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ.

‘ದೆಹಲಿಯ ಓಲ್ಡ್ ರಾಜೇಂದ್ರ ನಗರ ಪ್ರದೇಶದ ಕೋಚಿಂಗ್ ಕೇಂದ್ರದಲ್ಲಿ ವಿದ್ಯಾರ್ಥಿಗಳ ಸಾವು ಖೇದಕರ. ಇಂಥ ಘಟನೆ ನಮ್ಮ ರಾಜ್ಯದಲ್ಲೂ ಮರುಕಳಿಸದಂತೆ ಎಚ್ಚರವಹಿಸಬೇಕು. ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಯ ವ್ಯಾಪ್ತಿಯ ಆಯುಕ್ತರು ಈ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಕಟ್ಟಡದ ನೆಲಮಾಳಿಗೆಯಲ್ಲಿ ತರಬೇತಿ ಕೇಂದ್ರ, ಗ್ರಂಥಾಲಯ, ವಸತಿ ಸೌಕರ್ಯ ಸೇರಿದಂತೆ ಇನ್ನಿತರ ಯಾವುದೇ ಚಟುವಟಿಕೆ ನಡೆಸುತ್ತಿದ್ದರೂ, ಸುರಕ್ಷತೆಗೆ ಯಾವ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಪರಿಶೀಲಿಸಬೇಕು’ ಎಂದು ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ.

ಚರಂಡಿ ವ್ಯವಸ್ಥೆ, ವಿದ್ಯುತ್ ಪೂರೈಕೆಯ ಸುರಕ್ಷಿತ ವ್ಯವಸ್ಥೆ ಪರಿಶೀಲನೆ ಜತೆಯಲ್ಲಿ ನೆಲಮಾಳಿಗೆಯಲ್ಲಿ ನೀರು ಸರಾಗವಾಗಿ ಹರಿದುಹೋಗುವಂತಿದೆಯೇ ಎಂಬುದನ್ನು ಪರಿಶೀಲಿಸುವಂತೆಯೂ ಮುಖ್ಯಮಂತ್ರಿ ಸೂಚಿಸಿರುವುದಾಗಿ ಕಂದಾಯ ವಿಭಾಗದ ಪ್ರಧಾನ ಕಾರ್ಯದರ್ಶಿ ನಿಕುಂಜ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.